ಶೃಂಗೇರಿ ನ್ಯಾಯಾಲಯದಲ್ಲಿ ನಕ್ಸಲ್ ನಾಯಕಿ ಸಾವಿತ್ರಿ !

ಸುಮಾರು 1 ದಶಕದಿಂದ ಭೂಗತರಾಗಿದ್ದ ಮಲೆನಾಡಿನ ನಕ್ಸಲ್ ಚಳವಳಿಯಲ್ಲಿ ತೊಡಗಿಕೊಂಡಿದ್ದ
ಇತ್ತೀಚೆಗಷ್ಟೇ ಕೇರಳದಲ್ಲಿ ಬಂಧಿತರಾಗಿರುವ ಸಾವಿತ್ರಿ(37) ಅವರನ್ನು ಶುಕ್ರವಾರ ಶೃಂಗೇರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

 

ಬಿಗಿ ಪೊಲೀಸ್ ಭದ್ರತೆಯಲ್ಲಿ ಶುಕ್ರವಾರ ಬೆಳಗ್ಗೆ ಸಾವಿತ್ರಿ ಅವರನ್ನು ಶೃಂಗೇರಿ ಪಟ್ಟಣದ ನ್ಯಾಯಾಲಯದ ಆವರಣಕ್ಕೆ ಕರೆ ತಂದ ಪೊಲೀಸರು ಕೆಲ ಹೊತ್ತಿನ ಬಳಿಕ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಸಚಿನ್ ಅವರ ಮುಂದೆ ಹಾಜರುಪಡಿಸಿದರು.

ನ್ಯಾಯಾಧೀಶರು ಆರೋಪಿ ಸಾವಿತ್ರಿ ಅವರನ್ನು ಎ.8ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ.

ಶೃಂಗೇರಿ ಠಾಣೆಯಲ್ಲಿ ಸಾವಿತ್ರಿ ಅವರ ಮೇಲೆ 22 ಪ್ರಕರಣಗಳು ದಾಖಲಾಗಿವೆ ಎಂದು ತಿಳಿದು ಬಂದಿದೆ.

ಸಾವಿತ್ರಿ ಕಳಸ ಪಟ್ಟಣ ಸಮೀಪದ ಝರಿಮನೆ ಗ್ರಾಮದ ನಿವಾಸಿ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವಿರೋಧಿ ಹೋರಾಟದ ಸಂದರ್ಭದಲ್ಲಿ ಮಲೆನಾಡಿನಲ್ಲಿ ನಡೆದ ಅನೇಕ ಜನಪರ, ಆದಿವಾಸಿ, ಅರಣ್ಯ ಚಳವಳಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಅನಂತರ ನಕ್ಸಲ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಅವರು ಆ ಬಳಿಕ ಭೂಗತರಾಗಿದ್ದರು. ಇತ್ತೀಚೆಗೆ ಕೇರಳದ ಸುಲ್ತಾನ್ ಭತ್ತೇರಿಯಲ್ಲಿ ಪೊಲೀಸರಿಂದ ಬಂಧನಕ್ಕೊಳಗಾದ ನಕ್ಸಲ್ ನಾಯಕ ಬಿ.ಜಿ.ಕೃಷ್ಣಮೂರ್ತಿಯೊಂದಿಗೆ ಸಾವಿತ್ರಿಯನ್ನೂ ಕೂಡಾ ಪೊಲೀಸರು ಬಂಧಿಸಿದ್ದರು.

ನಂತರ ಬಾಡಿ ವಾರೆಂಟ್ ಮೇಲೆ ರಾಜ್ಯದ ಪೊಲೀಸರು ಬಿಜಿಕೆ ಹಾಗೂ ಸಾವಿತ್ರಿ ಅವರನ್ನು ಕೇರಳದಿಂದ ರಾಜ್ಯಕ್ಕೆ ಕರೆ ತಂದಿದ್ದರು. ಇತ್ತೀಚೆಗೆ ಬಿಜಿಕೆ ಅವರನ್ನು ಪೊಲೀಸರು ಕೊಪ್ಪ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಈ ಬೆನ್ನಲ್ಲೇ ಸಾವಿತ್ರಿ ಅವರನ್ನು ಶುಕ್ರವಾರ ಶೃಂಗೇರಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Leave A Reply

Your email address will not be published.