ನರೇಗಾ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಸಿಹಿ ಸುದ್ದಿ !! | ಕೂಲಿ ಮೊತ್ತ ಹೆಚ್ಚಿಸಿದ ಕೇಂದ್ರ ಸರ್ಕಾರ- ಇಂದಿನಿಂದಲೇ ಹೊಸ ವೇತನ ಜಾರಿ
ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಕಾರ್ಮಿಕರಿಗೆ ಸಿಹಿ ಸುದ್ದಿ ಇದೆ. ಒಂದು ದಿನದ ಕೂಲಿ ಮೊತ್ತವನ್ನು 289 ರೂ.ನಿಂದ 309 ರೂ ಏರಿಕೆ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದ್ದು, ಈ ಹೊಸ ಕೂಲಿ ಮೊತ್ತ ಇಂದಿನಿಂದಲೇ ಜಾರಿಗೆ ಬರಲಿದೆ.
ಕೇಂದ್ರ ಸರಕಾರ ಇಂದಿನಿಂದ ಹೆಚ್ಚುವರಿಯಾಗಿ ನಿತ್ಯ 20 ರೂ. ಕೂಲಿ ಹಣ ನೀಡಲಿದೆ. ಮೊದಲು 289 ರೂ. ನೀಡಲಾಗುತ್ತಿತ್ತು. ಇದೀಗ ಏ. 1ರಿಂದ ಕೂಲಿ ಕಾರ್ಮಿಕರಿಗೆ 309 ರೂ. ದೊರೆಯಲಿದೆ. ನಿತ್ಯ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಇದರಿಂದ ತುಂಬ ಅನುಕೂಲವಾಗಲಿದೆ. ಕೂಲಿ ಮೊತ್ತ ಹೆಚ್ಚಿಸುವಂತೆ ಕೂಲಿ ಕಾರ್ಮಿಕರು ಸಾಕಷ್ಟು ಒತ್ತಡ ಹೇರುತ್ತಿದ್ದರು. ಕೊನೆಗೂ ಕೇಂದ್ರ ಸರಕಾರ ಇವರ ಬೇಡಿಕೆಗೆ ಮನ್ನಣೆ ನೀಡಿದ್ದು, ಕೂಲಿ ದರ ಹೆಚ್ಚಳ ಮಾಡಿದೆ.
ನರೇಗಾದಿಂದಾಗಿ ಗ್ರಾಮೀಣ ಪ್ರದೇಶದ ಜನತೆ ತಾವು ವಲಸೆ ಹೋಗುವ ಬದಲಾಗಿ ಆಯಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ, ತಮ್ಮೂರಿನಲ್ಲಿಯೇ ಕೂಲಿ ಕೆಲಸ ಮಾಡಬಹುದಾಗಿದೆ. ನರೇಗಾದಡಿ ಕೆರೆ ಹೂಳೆತ್ತುವುದು, ಬದು ನಿರ್ಮಾಣ, ಆಟದ ಮೈದಾನಗಳ ನಿರ್ಮಾಣ, ನೀರಿನ ತೊಟ್ಟಿ ನಿರ್ಮಾಣ ಹೀಗೆ ಹಲವು ಕೆಲಸಗಳನ್ನು ಮಾಡಬಹುದು. ಹೀಗೆ ನಾನಾ ಬಗೆಯ ಕಾಮಗಾರಿಗಳನ್ನು ಜನಸ್ನೇಹಿಯವಾಗಿ ಮಾಡಲಾಗುತ್ತದೆ. ಇದೇ ಕಾರಣಕ್ಕೆ ನರೇಗಾ ಯೋಜನೆ ತುಂಬ ಯಶಸ್ವಿಯಾಗಿದೆ. ಇದ್ದೂರಿನಲ್ಲಿಯೇ ಗ್ರಾಮೀಣ ಪ್ರದೇಶದ ಜನರಿಗೆ ಸುಲಭವಾಗಿ ಕೆಲಸ ದೊರೆಯುತ್ತಿದೆ.
ಪ್ರಮುಖವಾಗಿ ವಲಸೆ ತಪ್ಪಿಸುವುದಕ್ಕಾಗಿಯೇ ನರೇಗಾ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದ ಜನರು ಕುಟುಂಬ ಸಮೇತ ಉದ್ಯೋಗ ಅರಸಿಕೊಂಡು ವಲಸೆ ಹೋಗುತ್ತಿದ್ದರು. ಇದರಿಂದಾಗಿ ಮಕ್ಕಳು ಸಹ ಶಿಕ್ಷಣದಿಂದ ವಂಚಿತರಾಗುತ್ತಿದ್ದರು. ಇದನ್ನು ಮನಗಂಡು ಅಂದಿನ ಯುಪಿಎ ಸರಕಾರ ಈ ಯೋಜನೆ ಜಾರಿಗೊಳಿಸಿತ್ತು. ಇದಾದ ಮೇಲೆ ಬಿಜೆಪಿ ಸರಕಾರ ಕೂಡ ಅಗತ್ಯಕ್ಕೆ ತಕ್ಕಂತೆ ಕೂಲಿ ಹೆಚ್ಚಳ ಮಾಡುವ ಮೂಲಕ ಕಾರ್ಮಿಕರ ಬೆನ್ನಿಗೆ ನಿಂತುಕೊಂಡಿದೆ.