ಬೆಳ್ತಂಗಡಿ: ಮಾರಿಗುಡಿ ಬಳಿಯಿರುವ ಸರ್ಕಾರಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಕಾರ್ಮಿಕನ ಮೃತದೇಹ ಪತ್ತೆ

ಬೆಳ್ತಂಗಡಿ ನಗರದ ಮಾರಿಗುಡಿ ದೇವಸ್ಥಾನದ ಪಕ್ಕದಲ್ಲಿರುವ ಸರಕಾರಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ಕಾರ್ಮಿಕನೋರ್ವನ ಶವ ಪತ್ತೆಯಾದ ಘಟನೆ ನಡೆದಿದೆ.

 

ಮೃತ ಪೌರಕಾರ್ಮಿಕರನ್ನು ಬೆಳ್ತಂಗಡಿಯ ನಿಂಗಶೆಟ್ಟಿ (43) ಎಂದು ಗುರುತಿಸಲಾಗಿದೆ. ಬೆಳ್ತಂಗಡಿ ಸರಕಾರಿ ಮೈದಾನದಲ್ಲಿ ಕೊಳೆತ ಸ್ಥಿತಿಯಲ್ಲಿ ನಿಂಗ ಶೆಟ್ಟಿಯವರ ಮೃತದೇಹ ನಿನ್ನೆ ಸಂಜೆ ಪತ್ತೆಯಾಗಿದ್ದು, ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂಲತಃ ಮೈಸೂರು ಜಿಲ್ಲೆಯ ಕೆ.ಆರ್‌ನಗರದ ನಿವಾಸಿಯಾದ ನಿಂಗಶೆಟ್ಟಿ, ಮೂರು ತಿಂಗಳಿನಿಂದ ಕೆಲಸಕ್ಕೆ ನಿಂಗಶೆಟ್ಟಿ ಗೈರಾಗಿದ್ದರು. ಕೆಲ ತಿಂಗಳ ಹಿಂದೆ ಯುವತಿಯೊಬ್ಬಳೊಂದಿಗಿನ ಪ್ರೀತಿ ವಿಚಾರ ಮನೆಯವರಿಗೆ ಗೊತ್ತಾಗಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿ ಮನೆಗೆ ವಾಪಸಾಗಿದ್ದರು. ಬೆಳ್ತಂಗಡಿ ಠಾಣೆಯಲ್ಲಿ ಪ್ರೀತಿ ವಿಚಾರ ರಾಜಿ ಪಂಚಾಯಿತಿ ಮಾಡಲಾಗಿತ್ತು. ನಿಂಗಶೆಟ್ಟಿಗೆ ಮದುವೆಯಾಗಿ ಒಂದು ಹೆಣ್ಣು, ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿ ಹಾಗೂ ಮಕ್ಕಳ ಜೊತೆ ಬೆಳ್ತಂಗಡಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.

ಶವ ಪತ್ತೆಯಾದ ಜಾಗದಲ್ಲಿ ಬಟ್ಟೆ,ಹಣ,ಗುರುತಿನ ಚೀಟಿ, ಚಪ್ಪಲ್,ಶೂ ಪತ್ತೆಯಾಗಿದೆ. ಶವವನ್ನು ಬೆಳ್ತಂಗಡಿ ಸರಕಾರಿ ಶವಾಗಾರಕ್ಕೆ ಸಾಗಿಸಲಾಗಿದ್ದು, ಬೆಳ್ತಂಗಡಿ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Leave A Reply

Your email address will not be published.