ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆಗೆ ಮುಸ್ಲಿಮರಿಗೆ ನೋ ಎಂಟ್ರಿ !

ರಾಜ್ಯದಲ್ಲಿ ಹಿಜಾಬ್ ವಿವಾದದ ಕಿಡಿ ಇನ್ನೂ ಕೂಡಾ ತಣ್ಣಗಾಗಿಲ್ಲ. ಎಲ್ಲೋ ಒಂದು ಕಡೆ ಹೊತ್ತಿದ ಕಿಡಿ ಈಗ ಹೈಕೋರ್ಟ್ ತೀರ್ಪಿನಿಂದಲೂ ಶಮನಗೊಂಡಂತೆ ಕಾಣುತ್ತಿಲ್ಲ. ಈ ಕಿಡಿ ಕಾಳ್ಗಿಚ್ಚಿನಂತೆ ಎಲ್ಲಾ ಕಡೆ ಎಲ್ಲಾ ವ್ಯಾಪಾರ ವಹಿವಾಟಿಗೂ ಹರಡಲು ಪ್ರಾರಂಭಗೊಂಡಿದೆ.

 

ಮುಸ್ಲಿಮರು ಈ ಹೈಕೋರ್ಟ್ ತೀರ್ಪಿನಿಂದಾಗಿ ಒಂದು ದಿನ ತಮ್ಮ ವ್ಯಾಪಾರ-ವಹಿವಾಟುಗಳನ್ನು ಬಂದ್ ಮಾಡುವ ಮೂಲಕ ಹಿಜಾಬ್ ಪರವಾಗಿ ತಮ್ಮ ಸಹಾನುಭೂತಿ ವ್ಯಕ್ತಪಡಿಸಿದ್ದರು. ಈ ಬಂದ್ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಹಲವು ಚರ್ಚೆಗೂ ಕಾರಣವಾಗಿತ್ತು. ಬಂದ್ ಕರೆಯ ಬಳಿಕ ಮುಸ್ಲಿಂ ವ್ಯಾಪಾರಿಗಳನ್ನು ವಿರೋಧಿಸುವ ಪ್ರಕ್ರಿಯೆಗಳು ಜಿಲ್ಲೆಯಲ್ಲಿ ಆರಂಭಗೊಂಡಿದ್ದವು.

ಪ್ರಮುಖವಾಗಿ ದ.ಕ ಜಿಲ್ಲೆಯ ಹಲವು ದೇವಸ್ಥಾನಗಳಲ್ಲಿ ನಡೆಯುವ ಜಾತ್ರೋತ್ಸವದಲ್ಲಿ ಹಿಂದೂ ಧರ್ಮದವರನ್ನು ಹೊರತುಪಡಿಸಿ ಅನ್ಯಧರ್ಮೀಯರ ಪಾಲ್ಗೊಳ್ಳುವಿಕೆಗೆ ವಿರೋಧ ಪ್ರಮುಖ ವಿಷಯವಾಗಿತ್ತು. ಅಲ್ಲದೆ ಜಾತ್ರೋತ್ಸವ ಸಂದರ್ಭದಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಗದಲ್ಲಿ ಅನ್ಯಮತೀಯರಿಗೆ ವ್ಯಾಪಾರಕ್ಕೆ ಅವಕಾಶವನ್ನೂ ನಿರಾಕರಿಸಲಾಗಿತ್ತು. ಇದು ಚರ್ಚೆಗೂ ಗ್ರಾಸವಾಗಿತ್ತು.

ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೆ ಜಿಲ್ಲೆಯಲ್ಲಿ ಅತಿ ದೊಡ್ಡ ಜಾತ್ರೆಯಾಗಿದ್ದು, ಸುಮಾರು 10 ದಿನಗಳ ಕಾಲ ನಡೆಯಲಿರುವ ಈ ಜಾತ್ರೆಯಲ್ಲಿ ವ್ಯಾಪಾರಕ್ಕಾಗಿ ಊರ ಹಾಗೂ ಪರವೂರಿನ ವ್ಯಾಪಾರಿಗಳು ಇಲ್ಲಿ ಬಂದು ಸೇರುತ್ತಾರೆ.

ಕಳೆದ ನಾಲೈದು ವರ್ಷಗಳಿಂದ ಈ ಜಾತ್ರೋತ್ಸವದಲ್ಲಿ ಹಿಂದೂಗಳಲ್ಲದೇ ಇತರರಿಗೆ ವ್ಯಾಪಾರಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತು. ಆದರೂ ಕಟ್ಟುನಿಟ್ಟಿನ ನಿಯಮ ಜಾರಿಯಲ್ಲಿಲ್ಲದ ಕಾರಣ ಅನ್ಯಮತೀಯರೂ ವ್ಯಾಪಾರ ನಡೆಸಿ ಹೋಗುತ್ತಿದ್ದರು. ಆದರೆ ಈ ಬಾರಿ ದೇವಸ್ಥಾನದ ಆಡಳಿತ ಮಂಡಳಿಯೇ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿಗೆ ತಂದಿದ್ದು, ವ್ಯಾಪಾರಕ್ಕಾಗಿ ಸ್ಥಳದ ಏಲಂ ಪ್ರಕ್ರಿಯಲ್ಲಿ ಕೇವಲ ಹಿಂದೂ ವ್ಯಾಪಾರಿಗಳಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಈ ಬಾರಿ ಮುಖ್ಯವಾಗಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಬರುವ ಈ ದೇವಸ್ಥಾನದಲ್ಲಿ ಎಪ್ರಿಲ್ 10 ರಿಂದ ಎಪ್ರಿಲ್ 19 ರ ವರೆಗೆ ಜಾತ್ರೋತ್ಸವ ನಡೆಯಲಿದ್ದು, ವ್ಯಾಪಾರ ವಹಿವಾಟು ಮಾಡುವವರಿಗೆ ದೇವಸ್ಥಾನದ ವತಿಯಿಂದಲೇ ಗುರುತಿನ ಚೀಟಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಏಲಂನಲ್ಲಿ ಅಂಗಡಿಗಳನ್ನು ಪಡೆದವರು ಹಾಗೂ ಅವರ ಪರವಾಗಿ ಅಂಗಡಿಗಳಲ್ಲಿ ನಿಲ್ಲುವವರು ತಮ್ಮ ಆಧಾರ್ ಕಾರ್ಡ್ ಹಾಗೂ ಫೋಟೋಗಳನ್ನು ಜಾತ್ರೋತ್ಸವಕ್ಕೆ ಮುಂಚಿತವಾಗಿಯೇ ದೇವಸ್ಥಾನದ ಕಛೇರಿಗೆ ನೀಡಬೇಕು. ಜಾತ್ರೆಯ ಸಂದರ್ಭದಲ್ಲಿ ಅಂಗಡಿದಾರರಿಗೆ ಗುರುತಿನ ಚೀಟಿಯನ್ನು ವಿತರಿಸಲು ಕ್ರಮ ಕೂಡಾ ಕೈಗೊಳ್ಳಲಾಗಿದೆ.

ಕಳೆದ ನಾಲ್ಕೈದು ವರ್ಷಗಳಿಂದ ಈ ದೇವಸ್ಥಾನದ ಜಾತ್ರೋತ್ಸವದ ಸಂದರ್ಭದಲ್ಲಿ ಹಿಂದೂಗಳಲ್ಲದವರಿಗೆ ವ್ಯಾಪಾರಕ್ಕೆ ಅವಕಾಶವನ್ನು ನಿರಾಕರಿಸಲಾಗಿತ್ತಾದರೂ, ಜಾತ್ರೋತ್ಸವದ ಪ್ರಯುಕ್ತ ನಡೆಯುವ ದೇವರ ರಥೋತ್ಸವದ ಸಂದರ್ಭದಲ್ಲಿ ಸಿಡಿಮದ್ದು ಪ್ರದರ್ಶನಕ್ಕೆ ಮುಸ್ಲಿಂ ಪಂಗಡದವರನ್ನೇ ಆಯ್ಕೆ ಮಾಡಲಾಗುತ್ತಿತ್ತು.

ಆದರೆ ವಿಶೇಷ ಎಂಬಂತೆ ಈ ಬಾರಿ ಈ ವ್ಯವಸ್ಥೆಯನ್ನೂ ಕೂಡಾ ಬದಲಿಸಲಾಗಿದೆ. ಸಿಡಿಮದ್ದು ಪ್ರದರ್ಶನ ವ್ಯವಸ್ಥೆಯನ್ನೂ ಹಿಂದೂಗಳಿಂದಲೇ ನಿರ್ವಹಿಸಲು ತೀರ್ಮಾನ ಕೈಗೊಂಡಿದೆ. ದೇವಸ್ಥಾನದ ನಿಯಮಗಳನ್ನು ಮೀರಿ ವ್ಯಾಪಾರ ನಡೆಸಿದ್ದೇ ಆದಲ್ಲಿ ಅಂತವರ ವಿರುದ್ಧ ಕ್ರಮಕ್ಕೂ ಚಿಂತನೆ ನಡೆಸಲಾಗಿದೆ.

ಒಟ್ಟಾರೆ ಹಿಜಾಬ್ ವಿವಾದ ಉದ್ಭವಗೊಂಡ ಬಳಿಕ ಸಮಾಜದಲ್ಲಿ ಒಂದು ವಿಭಜನೆ ಪ್ರಾರಂಭವಾಗಿದೆ ಅನಿಸುತ್ತದೆ. ಈ ವ್ಯಾಪಾರಿ ವಿಭಜನೆ ಯಾವ ಹಂತಕ್ಕೆ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ.

Leave A Reply

Your email address will not be published.