ಪುರುಷರಕಟ್ಟೆ : ಸರಸ್ವತಿ ವಿದ್ಯಾಮಂದಿರದಲ್ಲಿ ದಶಪ್ರಣತಿ ಕಾರ್ಯಕ್ರಮ
ನರಿಮೊಗರು : ಶಿಕ್ಷಣ ಕ್ಷೇತ್ರದಲ್ಲಿ ವಿಭಿನ್ನ ಪ್ರಯೋಗಗಳ ಮೂಲಕ ವಿದ್ಯಾರ್ಥಿಗಳಲ್ಲಿ ಹೊಸ ಆಲೋಚನೆ ತುಂಬುತ್ತಿರುವ ಶಾಲೆ ಇನ್ನಷ್ಟು ಸಾಧನೆ ಮಾಡಲಿ ಎಂದು ಶಾಂತಿಗೋಡು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಮೊಕ್ತೇಸರರಾದ ಸುಬ್ರಹ್ಮಣ್ಯ ತೋಳ್ಪಾಡಿತ್ತಾಯ ಹೇಳಿದರು.
ಅವರು ಪುರುಷರಕಟ್ಟೆಯಲ್ಲಿರುವ ಸರಸ್ವತಿ ವಿದ್ಯಾಮಂದಿರ ಶಿಶುಮಂದಿರ, ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವರ್ಧಂತ್ಯುತ್ಸವ ,ದಶ ಪ್ರಣತಿ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
“ದಶಪ್ರಣತಿ “ಎಂಬ ವಿಶಿಷ್ಟ ಕಾರ್ಯಕ್ರಮ ವಿದ್ಯಾಮಂದಿರದ ಹತ್ತುವರ್ಷಗಳ ಸಾಧನೆಗಳ ಚಿತ್ರವನ್ನು ಅನಾವರಣ ಮಾಡಿತು.
ಮುಖ್ಯ ಅತಿಥಿಯಾಗಿದ್ದ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷೆ ಉಮಾ ದಿನೇಶ್ ಪ್ರಸನ್ನ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ದೊರಕುತ್ತಿರುವ ಜೀವನ ಶಿಕ್ಷಣದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಉದ್ಯಮಿ ನವೀನಕುಮಾರ್ ರೈ ಕೈಕಾರ ಶುಭ ಹಾರೈಸಿದರು.
ಶಾಲಾ ಸಂಚಾಲಕ ಅವಿನಾಶ್ ಕೊಡಂಕಿರಿ, ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಹತ್ತು ವರ್ಷಗಳಲ್ಲಿ ಶಾಲೆ ನಡೆದುಬಂದ ಹಾದಿಯ ಬಗ್ಗೆ ಬೆಳಕು ಚೆಲ್ಲಿದರಲ್ಲದೆ ಆರು ಎಕರೆಯ ನೂತನ ನಿವೇಶನದಲ್ಲಿ ಕಾರ್ಯ ಯೋಜನೆ ಬಗ್ಗೆ ಮಾಹಿತಿ ನೀಡಿದರು.
ಶಾಲೆಯಲ್ಲಿ ಹತ್ತುವರ್ಷ ಅಧ್ಯಯನ ನಡೆಸಿದ 28 ವಿದ್ಯಾರ್ಥಿಗಳಿಗೆ “ದಶ ಪ್ರೇರಣಾ” ಎಂಬ ವಿನೂತನ ಸನ್ಮಾನ ನಡೆಯಿತು.
ವೇದಿಕೆಯಲ್ಲಿ ಶಾಲಾ ಆಡಳಿತಾಧಿಕಾರಿ ಶ್ರೀಮತಿ ಶುಭಾ ಅವಿನಾಶ್,ಶಿಕ್ಷಕ ರಕ್ಷಕ ಸಂಘದ ಶ್ರೀ ಸುರೇಶ ಭಟ್ ಸೂರ್ಡೇಲು, ಶಾಲಾ ಸುರಕ್ಷತಾ ಸಮಿತಿಯ ವಿಶ್ವನಾಥ್ ಬಲ್ಯಾಯ ಉಪಸ್ಥಿತರಿದ್ದರು.
ಮುಖ್ಯಗುರು ರಾಜಾರಾಮ ವರ್ಮ ಶೈಕ್ಷಣಿಕ ವರದಿ ಮಂಡಿಸಿದರು. ರಾಜಾರಾಮ ನೆಲ್ಲಿತ್ತಾಯ ಅತಿಥಿಗಳನ್ನು ಪರಿಚಯಿಸಿದರೆ, ಪರೀಕ್ಷಿತ್ ತೋಳ್ಪಾಡಿ ವಂದಿಸಿದರು.
ವಿದ್ಯಾರ್ಥಿಗಳು ಕಾರ್ಯಕ್ರಮ ನಿರೂಪಣೆ ನಡೆಸಿದರು.
ಶಿಕ್ಷಕರು ಹತ್ತು ದೀಪಗಳನ್ನು ಬೆಳಗಿದರು.
ಶಿಶುಮಂದಿರದಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.