ನಿಷೇಧದ ಹೊಸ್ತಿಲಲ್ಲಿ ಹಲಾಲ್ ?! | ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ ಎಂದ ಸಿ ಎಂ ಬೊಮ್ಮಾಯಿ
ಬೆಂಗಳೂರು: ಹಲಾಲ್ ಮಾಂಸ ಬಳಕೆಯನ್ನು ನಿಷೇಧಿಸುವಂತೆ ರಾಜ್ಯಾದ್ಯಂತ ಆರಂಭಗೊಂಡಿರುವ ಅಭಿಯಾನದ ಬಗ್ಗೆ ಸರ್ಕಾರ ಗಮನ ಹರಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿದ ಅವರು, ಹಲಾಲ್ ಕಟ್ ಮಾಂಸ ಬಳಕೆ ನಿಷೇಧ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಬೇಕಿದೆ. ನಿಯಮಕ್ಕೂ ಇದಕ್ಕೂ ಸಂಬಂಧವಿಲ್ಲ. ಹಲಾಲ್ ಕಟ್ ಮಾಂಸ ಬಳಕೆ ಮಾಡಬಾರದೆಂಬ ಮಾತುಗಳು ಹಿಂದಿನಿಂದಲೂ ಕೇಳಿಬರುತ್ತಿದ್ದವು. ಈಗ ಗಂಭೀರ ಆಕ್ಷೇಪಣೆಗಳು ಹುಟ್ಟಿಕೊಂಡಿವೆ.ಈ ಕುರಿತು ಪರಿಶೀಲಿಸುತ್ತೇವೆ ಎಂದರು.
ಸರ್ಕಾರ ಈ ವಿಚಾರ ಬಗ್ಗೆ ಸದ್ಯದಲ್ಲಿಯೇ ತನ್ನ ನಿಲುವನ್ನು ತಿಳಿಸಲಿದೆ. ಬಲಪಂಥೀಯರು ಈ ಬಗ್ಗೆ ಅಭಿಯಾನ ನಡೆಸುತ್ತಿದ್ದಾರಲ್ಲವೇ ಎಂದು ಕೇಳಿದ್ದಕ್ಕೆ ಇಂತಹ ಹಲವು ಅಭಿಯಾನಗಳು ನಡೆಯುತ್ತಿದ್ದವು. ಪ್ರತಿಕ್ರಿಯೆ ನೀಡಬೇಕಾದ ವಿಷಯಗಳಿಗೆ ನೀಡುತ್ತೇವೆ ಎಂದಷ್ಟೇ ಹೇಳಿದರು.
ಬಲಪಂಥೀಯ ಹಿಂದೂ ಸಂಘಟನೆ ಕಾರ್ಯಕರ್ತರು ಮಾಡುತ್ತಿರುವ ಬೇಡಿಕೆಗಳ ಬಗ್ಗೆ ಸರ್ಕಾರ ಮೌಲ್ಯಮಾಪನ ಮಾಡಲಿದ್ದು ಇದರಲ್ಲಿ ಸತ್ಯಾಂಶವಿದೆಯೇ ಎಂದು ನೋಡಲಿದೆ ಎಂದರು.
ರಾಜ್ಯದಲ್ಲಿ ಇಂತಹ ಸನ್ನಿವೇಶ ಈಗಷ್ಟೇ ಆರಂಭವಾಗಿದೆ. ಇದರ ಸಮಗ್ರತೆಯನ್ನು ಗಮನಿಸಬೇಕಾಗುತ್ತದೆ. ಕೆಲವು ನಿಯಮಗಳು, ಆಚರಣೆಗಳು ಮೊದಲಿಂದಲೂ ಇವೆ. ನಿಯಮಗಳು, ಆಚರಣೆಗಳಂತೆ ನಡೆದುಕೊಂಡು ಹೋಗ್ತಿದೆ. ಧಾರ್ಮಿಕ ದತ್ತಿ ಕಾಯ್ದೆಯ ನಿಯಮದ ಬಗ್ಗೆ ಗಂಭೀರ ಆಕ್ಷೇಪ ಇದೆ. ಗಂಭೀರ ಆಕ್ಷೇಪಗಳ ಬಗ್ಗೆ ಅವಲೋಕನ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಹಲಾಲ್ ಮಾಂಸ ಬಳಕೆ ನಿಷೇಧಿಸಬೇಕೆಂದು ಹಿಂದೂಪರ ಸಂಘಟನೆಗಳು ಅಭಿಯಾನ ಆರಂಭಿಸಿವೆ. ಜನರ ಅಭಿವೃದ್ಧಿ ಮುಖ್ಯ, ಜನರಿಗೆ ಶಾಂತಿ ಮತ್ತು ಭದ್ರತೆ ಸಿಗಬೇಕಾಗಿದೆ ಎಂದರು.
ಸರ್ಕಾರದ ನಡೆ ಖಂಡಿಸಿ ಪ್ರಗತಿಪರರಿಂದ ಸಿಎಂಗೆ ಪತ್ರದ ಬಗ್ಗೆ ಮಾತನಾಡಿದ ಅವರು ಪ್ರಗತಿಪರರ ಪತ್ರದ ವಾಸ್ತವಾಂಶ ಅರಿತು ನಿರ್ಧಾರ ಕೈಗೊಳ್ಳುತ್ತೇನೆ. ಯಾವೆಲ್ಲ ನಿರ್ಧಾರ ತೆಗೆದುಕೊಳ್ಳಬೇಕೆಂದು ಯೋಚಿಸುತ್ತೇವೆ ಎಂದು ತಿಳಿಸಿದ್ದಾರೆ.
ಹಲಾಲ್ ಮಾಂಸ ನಿಷೇಧ ಮಾಡಲು ಅಭಿಯಾನ ವಿಚಾರವಾಗಿ ಬೆಂಗಳೂರಿನಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನೆ ನೀಡಿದರೆ ಕ್ರಮ ಕೈಗೊಳ್ಳುತ್ತೇವೆ. ಯುಗಾದಿ ಹಿನ್ನೆಲೆ ಹಲಾಲ್ ಮಾಂಸ ಖರೀದಿ ಬಗ್ಗೆ ಚರ್ಚೆ ಆಗುತ್ತಿದೆ. ಹಲಾಲ್ ನಮ್ಮ ದೇವರಿಗೆ ಆಗಲ್ಲ ಎಂದು ಚರ್ಚೆ ನಡೆದಿದೆ. ಹಲಾಲ್ ಮಾಂಸ ಖರೀದಿಸಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಚರ್ಚೆ ನಡೆಯುವುದರಲ್ಲಿ ತಪ್ಪೇನೂ ಇಲ್ಲ. ಇದು ವಿಕೋಪಕ್ಕೆ ಹೋಗಬಾರದು ಎಂದು ಹೇಳಿದ್ದಾರೆ.