ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯದಿಂದ ಇಡೀ ರಾತ್ರಿ ಬ್ಯಾಂಕ್ ಲಾಕರ್ ನಲ್ಲೇ ಲಾಕ್ ಆದ ವೃದ್ಧ !! | ಮಧುಮೇಹದಿಂದ ಬಳಲುತ್ತಿದ್ದ 84 ರ ವಯೋವೃದ್ಧ ಬದುಕಿ ಬಂದದ್ದು ಪವಾಡವೇ
ಒಮ್ಮೊಮ್ಮೆ ನಮ್ಮ ನಿರ್ಲಕ್ಷ್ಯತನ ಇನ್ನೊಬ್ಬರನ್ನು ಬಹುದೊಡ್ಡ ಕಷ್ಟಕ್ಕೆ ದೂಡಬಹುದು. ಇದೀಗ ಅಂತಹುದೇ ಘಟನೆಯೊಂದು ಬೆಳಕಿಗೆ ಬಂದಿದ್ದು, ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯದಿಂದ 84 ವರ್ಷದ ವಯೋ ವೃದ್ದರೊಬ್ಬರು ಇಡೀ ರಾತ್ರಿ ಬ್ಯಾಂಕ್ ವೊಂದರ ಲಾಕರ್ ನಲ್ಲಿಯೇ ಕಾಲ ಕಳೆದ ಘಟನೆ ಹೈದ್ರಾಬಾದ್ ನಗರದಲ್ಲಿ ನಡೆದಿದೆ.
ಸೋಮವಾರ ಸಂಜೆ 4-30 ರಿಂದ ನಿನ್ನೆ ಬೆಳಗ್ಗೆ 10-30ರವರೆಗೂ ಸುಮಾರು 18 ಗಂಟೆಗಳ ಕಾಲ ಬ್ಯಾಂಕ್ ಲಾಕರ್ ರೂಮ್ ನಲ್ಲಿಯೇ ಇದ್ದ ವೃದ್ಧನನ್ನು ಪೊಲೀಸರು ರಕ್ಷಿಸಿದ್ದಾರೆ. ಲಾಕರ್ ರೂಮ್ ನಲ್ಲಿ ಅರೆಪ್ರಜ್ಞಾವಸ್ಥೆಯಲ್ಲಿ ಮಲಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ.
ಲಾಕರ್ ತೆಗೆಯಲು ಸೋಮವಾರ ಸಂಜೆ ವೃದ್ಧ ಬ್ಯಾಂಕ್ ಗೆ ಭೇಟಿ ನೀಡಿದ್ದಾರೆ. ಆದರೆ, ಅವರನ್ನು ನೋಡದ ಬ್ಯಾಂಕ್ ಸಿಬ್ಬಂದಿ, ಲಾಕರ್ ಒಳಗಡೆಯೇ ಅವರನ್ನು ಬಿಟ್ಟು ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಧುಮೇಹದಿಂದ ಬಳಲುತ್ತಿದ್ದ ವೃದ್ದರು ಮನೆಗೆ ವಾಪಸ್ ಬಾರದಿದ್ದಾಗ ಅವರ ಕುಟುಂಬ ಸದಸ್ಯರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ಪರೀಕ್ಷಿಸಿದಾಗ ವೃದ್ಧ ಜುಬಿಲಿ ಹಿಲ್ಸ್ ಚೆಕ್ ಪೋಸ್ಟ್ ಮೂಲಕ ರಸ್ತೆ ದಾಟಿ, ಬ್ಯಾಂಕ್ ಆವರಣ ಪ್ರವೇಶಿಸಿರುವುದು ಪತ್ತೆಯಾಗಿತ್ತು.
ಬ್ಯಾಂಕ್ ಆವರಣ ಲಾಕ್ ಆದ ನಂತರ ಎಲ್ಲಾ ಸಿಬ್ಬಂದಿ ಹೊರಗೆ ಬಂದರೆ, ವೃದ್ದ ಮಾತ್ರ ಹೊರಗಡೆ ಬಂದಿರಲಿಲ್ಲ. ಅದರಿಂದ ಅವರು ಬ್ಯಾಂಕ್ ಒಳಗಡೆಯೇ ಇರುವುದು ಸ್ಪಷ್ಟವಾಗಿತ್ತು. ನಂತರ ಪೊಲೀಸರು ಬ್ಯಾಂಕ್ ಗೆ ಆಗಮಿಸಿ, ಲಾಕರ್ ತೆಗೆಸಿದಾಗ ಅದರೊಳಗೆ ಅವರು ಪತ್ತೆಯಾಗಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.