ದೇವರ ಉತ್ಸವ ನೋಡುತ್ತಿದ್ದ ವೇಳೆ ಕುಸಿದ ಮನೆಯ ತಾರಸಿ !! | ಇಬ್ಬರು ಮಹಿಳೆಯರು ಸಾವು, ಐವತ್ತಕ್ಕೂ ಹೆಚ್ಚು ಜನರಿಗೆ ಗಂಭೀರ ಗಾಯ
ಆ ಊರಲ್ಲಿ ದೇವಸ್ಥಾನದ ದೇವರ ಉತ್ಸವ ಕಾರ್ಯಕ್ರಮ ಸಂಭ್ರಮದಿಂದ ನಡೆಯುತ್ತಿತ್ತು. ಈ ವೇಳೆ ಇದ್ದಕ್ಕಿದ್ದಂತೆಯೇ ಅಲ್ಲಿ ಸಾವು ನೋವಿನ ಚೀರಾಟ ಕೇಳಲು ಆರಂಭವಾಯಿತು. ಅಷ್ಟಕ್ಕೂ ಅಲ್ಲೊಂದು ಭೀಕರ ದುರಂತ ಸಂಭವಿಸಿತು.
ಹೌದು. ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಕೊಂಡೋತ್ಸವ ನೋಡುವ ಸಲುವಾಗಿ ಮನೆಯೊಂದರ ತಾರಸಿ ಏರಿದ್ದ ವೇಳೆ ಮನೆಯ ತಾರಸಿ ಕುಸಿದು ಇಬ್ಬರು ಮಹಿಳೆಯರು ಮೃತಪಟ್ಟು, 50 ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯ ಹುಲಿಗೆರೆಪುರ ಗ್ರಾಮದಲ್ಲಿ ಇಂದು ಮುಂಜಾನೆ ನಡೆದಿದೆ.
ಗ್ರಾಮದಲ್ಲಿ ನಡೆಯುತ್ತಿದ್ದ ಬಸವೇಶ್ವರ ದೇವರ ಕೊಂಡೋತ್ಸವ ನೋಡಲು ದೇವಸ್ಥಾನ ಮುಂದೆ ಇದ್ದ ಮಾದೇಗೌಡರ ಮನೆಯ ತಾರಸಿ ಮೇಲೆ 100 ಕ್ಕೂ ಹೆಚ್ಚು ಜನರು ಜಮಾಯಿಸಿದ್ದರು. ಈ ವೇಳೆ ತಾರಸಿ ಕುಸಿದಿದ್ದು, ಅದೇ ಗ್ರಾಮದ ಸರಸ್ವತಿ ಹಾಗೂ ಪುಟ್ಟಲಿಂಗಮ್ಮ ಎನ್ನುವ ಇಬ್ಬರು ಮಹಿಳೆಯರು ತಾರಸಿ ಅಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆಯಲ್ಲಿ ತಾರಸಿ ಮೇಲಿದ್ದ 50 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಮದ್ದೂರಿನ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಇದಲ್ಲದೆ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಹಲವರಿಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಘಟನೆ ಕುರಿತಂತೆ ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.