ಈ ಊರಿನ ಜನರಿಗೆ ಕಂಕಣಭಾಗ್ಯವೇ ಇಲ್ಲ; ವರ, ವಧು ಸರಿ ಇದ್ದಾರೆ, ಪಥ ಸರಿ ಇಲ್ಲ!
ಈ ಊರಿನ ಕನ್ಯೆಗೆ ವರ ಸಿಗುತ್ತಿಲ್ಲ, ವರನಿಗೆ ವಧು ಸಿಗುತ್ತಿಲ್ಲ! ಕಾರಣ ಇವರ ಸಮಸ್ಯೆ ಅಲ್ಲ ಪಥದ ಸಮಸ್ಯೆ. ಜೀವನ ಪಥ ಸರಿ ಇದೆ ಆದರೆ ಗ್ರಾಮದ ದಾರಿ ಸರಿ ಇಲ್ಲ! ಪೋಟೊ ನೋಡಿ , ಗುಣ ನೋಡಿ ಮದುವೆ ನಿಶ್ಚಯವಾಗುತ್ತದೆ ಆದರೆ ಸಂಬಂಧ ಬೆಳೆಸಲು ಬರುವಾಗ ಗ್ರಾಮದ ರಸ್ತೆ ಅಡ್ಡಗಾಲು ಹಾಕುತ್ತಿದೆ.
ಗ್ರಾಮದ ಯುವಕರು, ಯುವತಿಯರು ಸಮಸ್ಯೆ ಅನುಭವಿಸುತ್ತಿದ್ದಾರೆ. ಊರಿಗೆ ಹೆಣ್ಣುಕೊಡಲು, ಊರಿನ ಹೆಣ್ಣು ಮಕ್ಕಳನ್ನು ವಿವಾಹವಾಗಲು ಯಾರೂ ಸಹ ಮುಂದೆ ಬರುತ್ತಿಲ್ಲ. ಸುಮಾರು 150-200 ಮನೆಗಳ ಈ ಗ್ರಾಮದಲ್ಲಿ ಸುಮಾರು 50ಕ್ಕೂ ಹೆಚ್ಚು ಮದುವೆ ವಯಸ್ಸು ಮೀರಿದ ಯುವಕ, ಯುವತಿಯರಿದ್ದಾರೆ. ವಧು-ವರರ ಕಡೆಯವರು ಬರುತ್ತಾರೆ. ಬಂದು ನೋಡುತ್ತಾರೆ. ಆಮೇಲೆ ಅವರ ಅಭಿಪ್ರಾಯ ಹೇಳುವುದಿಲ್ಲ. ತೀರಾ ಬಲವಂತವಾಗಿ ಫೋನ್ ಮಾಡಿ ಕೇಳಿದರೆ, ನಿಮ್ಮೂರಿಗೆ ಬೇರೆ ರಸ್ತೆ ಇಲ್ಲ ಎಂಬ ಉತ್ತರ ಬರುತ್ತದೆ.
ರಸ್ತೆ ಮಧ್ಯೆ ಕಲ್ಲಿನ ಬಂಡೆಗಳು ಇವೆ. ರಸ್ತೆ ಸುಮಾರು ಅರ್ಧ ಅಡಿ ಗುಂಡಿ ಕೂಡ ಬಿದ್ದಿದೆ. ಮಳೆಗಾಲದಲ್ಲಿ ಇಲ್ಲಿನ ರಸ್ತೆಯಲ್ಲಿ ನಡೆದುಕೊಂಡು ಹೋಗುವುದು ಸಹ ಸಾಹಸ ಇಲ್ಲಿನ ನಿವಾಸಿಗಳು ನಮಗೊಂದು ರಸ್ತೆ ನಿರ್ಮಿಸಿಕೊಡಿ ಎಂದು ಕೇಳುತ್ತಿದ್ದಾರೆ.
ಬೆರಣಗೋಡು ಗ್ರಾಮ ಚಿಕ್ಕಮಗಳೂರು ಜಿಲ್ಲಾ ಕೇಂದ್ರದಿಂದ ಸುಮಾರು 22 ಕಿ. ಮೀ. ದೂರದಲ್ಲಿದೆ. ಈ ಗ್ರಾಮ ಚಿಕ್ಕಮಗಳೂರು ತಾಲೂಕಿಗೆ ಸೇರಿದರೂ ಇಲ್ಲಿನ ಜನ ಮತ ಹಾಕೋದು ಮೂಡಿಗೆರೆ ವಿಧಾನಸಭಾ ಕ್ಷೇತ್ರಕ್ಕೆ. ಈ ಗ್ರಾಮದಲ್ಲಿ ಈಗ 30 ವರ್ಷ ವಯಸ್ಸಿನ ಯುವಕ ಯುವತಿಯರು ಇಲ್ಲಿಯ ವರೆಗೆ ನಮ್ಮ ಊರಿಗೆ ರಸ್ತೆ ಆಗಿದ್ದು ನಾವು ನೋಡೆ ಇಲ್ಲ. ಆಗೆ ಇಲ್ಲ ಎನ್ನುತ್ತಾರೆ. ಸರ್ಕಾರಕ್ಕೆ ದಶಕಗಳಿಂದ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಪ್ರಯೋಜನವಾಗಿಲ್ಲ.
ಹಳ್ಳಿಯ ರಸ್ತೆ ಸರಿ ಇಲ್ಲ ಅನ್ನೋ ಕಾರಣಕ್ಕೆ ಈ ಊರಿಗೆ ಶಿಕ್ಷಕರು ಕೂಡ ಬರೋದಕ್ಕೆ ಹಿಂದೆ-ಮುಂದೆ ನೋಡುತ್ತಾರೆ. ಹಾಗಾಗಿ ಮಕ್ಕಳು ಶಿಕ್ಷಣಕ್ಕೂ ಪರದಾಡುತ್ತಿದ್ದಾರೆ. ರಸ್ತೆ ಸರಿ ಇಲ್ಲದಾಗ ಇನ್ನು ಸಾರಿಗೆಯ ಮಾತು ದೂರವೇ ಉಳಿಯಿತು.