ಎರಡೆರಡು ಬಾರಿ ಮದುವೆ ಮನೆಯಿಂದ ನಾಪತ್ತೆಯಾದ ವರ !! | ಕಾದು ಸುಸ್ತಾದ ವಧು ಮನೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗ ಮದುಮಗ ಪ್ರತ್ಯಕ್ಷ | ಅಷ್ಟಕ್ಕೂ ನಾಪತ್ತೆಯಾಗಿದ್ದ ವರ ಹೋದದ್ದಾದರೂ ಎಲ್ಲಿಗೆ!??
ಮದುವೆ ಎಂದರೆ ಸಂಭ್ರಮ. ಎರಡು ಕುಟುಂಬದ ಸಮ್ಮಿಲನದ ಈ ಸಂದರ್ಭದಲ್ಲಿ ಮದುಮಗನೇ ನಾಪತ್ತೆಯಾದರೆ !? ಹೌದು. ಇಂತಹ ಘಟನೆಯೊಂದು ಬೆಳಕಿಗೆ ಬಂದಿದ್ದು, ಮದುವೆಯ ದಿನದಂದೇ ವರ ನಾಪತ್ತೆಯಾಗಿದ್ದಾನೆ. ಎಷ್ಟೇ ಕಾದರೂ ವರ ಬಾರದಿದ್ದಕ್ಕೆ ವಧುವಿನ ಕುಟುಂಬಸ್ಥರು ಪೊಲೀಸ್ ಠಾಣೆ ಮಟ್ಟಿಲೇರಿದ ವಿಚಿತ್ರ ಘಟನೆ ಬಿಹಾರದ ಧನ್‍ಬಾದ್ ಪ್ರದೇಶದಲ್ಲಿ ನಡೆದಿದೆ.
ಧನ್ಬಾದ್‍ನ ಭುಲಿ ನಿವಾಸಿ ರತ್ನೇಶ್ ಕುಮಾರ್ ನಾಪತ್ತೆಯಾದ ಮದುಮಗ. ಈತ ಭಾರತೀಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಮದುವೆ ಸಮಯದಲ್ಲಿ ರತ್ನೇಶ್ ನಾಪತ್ತೆಯಾಗಿದ್ದು, ಎಷ್ಟು ಕಾದರೂ ಬಾರದೇ ಇದ್ದಾಗ ವಧುವಿನ ಕಡೆಯವರು ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದಾರೆ. ಈ ಬಗ್ಗೆ ವಧುವಿನ ಸಂಬಂಧಿಕರು, ವರ ವಂಚಿಸಿದ್ದಾನೆ ಎಂದು ಆರೋಪಿಸಿದ್ದಾರೆ. ಆದರೆ ನಂತರದಲ್ಲಿ ವರ ವಾಪಸ್ ಬಂದಿದ್ದಾನೆ. ಹಾಗಾಗಿ ತಡರಾತ್ರಿ ಈ ಮದುವೆ ಮಾಡಲಾಗಿದೆ.
ಕಳೆದ ವರ್ಷವೂ ಇದೇ ರೀತಿ ಆಗಿತ್ತು, ಮದುವೆಯ ದಿನಾಂಕ ನಿಗದಿಯಾಗಿತ್ತು. ಆದರೆ ವರ ರತ್ನೇಶ್ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ವಧುವಿನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಮಹಿಳಾ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರ ನಡುವೆ ಒಪ್ಪಂದವಾಗಿತ್ತು ಎಂದು ವಧು ಕಡೆಯವರು ತಿಳಿಸಿದ್ದಾರೆ.
ಆಗ ರತ್ನೇಶ್ ಕಡೆಯವರು ಪೊಲೀಸ್ ಸಮ್ಮುಖದಲ್ಲಿಯೇ ಮಾರ್ಚ್ 25ರಂದು ಮದುವೆಗೆ ಒಪ್ಪಿಗೆ ಸೂಚಿಸಿದ್ದರು. ಇದರಿಂದಾಗಿ ವಧು ಕಡೆಯವರು ಮದುವೆಗೆ ಸಂಪೂರ್ಣ ತಯಾರಿ ಮಾಡಿಕೊಂಡಿದ್ದರು. ಆದರೆ ವರ ಬಾರದಿದ್ದಾಗ ವಧುವಿನ ಕುಟುಂಬಸ್ಥರು ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಆದರೂ ಎರಡೆರಡು ಬಾರಿ ಮದುವೆ ಮನೆಯಿಂದ ನಾಪತ್ತೆಯಾಗಿದ್ದ ವರನಿಗೆ ಕೊನೆಗೂ ಮದುವೆ ಮಾಡಲಾಗಿದೆ. ಆದರೆ ಆತನಿಗೆ ಈ ಮದುವೆ ಇಷ್ಟವಿಲ್ಲ ಎಂದು ಮೇಲ್ನೋಟಕ್ಕೆ ಕಂಡುಬಂದರೂ ಯಾವ ಕಾರಣಕ್ಕೆ ಹೆಣ್ಣಿನ ಮನೆಯವರು ಈ ಮದುವೆ ಮಾಡಿಸಿದ್ದಾರೆ ಎಂಬುದು ಮಾತ್ರ ಉತ್ತರವಿಲ್ಲದ ಪ್ರಶ್ನೆಯಾಗಿದೆ.