ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರ್ಬಂಧ !! | ಇಸ್ಲಾಮಿಕ್ ದೇಶದಲ್ಲಿ ಭಾರತೀಯ ಮೂಲದ ರೆಸ್ಟೋರೆಂಟ್ ಬಂದ್ !!
ಕರ್ನಾಟಕದಲ್ಲಿ ಆರಂಭವಾದ ಹಿಜಾಬ್ ವಿವಾದ ಇದೀಗ ಅಂತಾರಾಷ್ಟ್ರೀಯ ಮಟ್ಟಕ್ಕೆ ಬೆಳೆದು ನಿಂತಿದೆ. ಇಸ್ಲಾಮಿಕ್ ದೇಶವಾದ ಬಹ್ರೇನ್ನ ಅದ್ಲಿಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್ನಲ್ಲಿ ಹಿಜಾಬ್ ಧರಿಸಿದ್ದ ಮಹಿಳೆಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಭಾರತೀಯ ರೆಸ್ಟೋರೆಂಟ್ ಒಂದನ್ನು ಬಂದ್ ಮಾಡಿಸಿದ್ದಾರೆ.
ಹಿಜಾಬ್ ಧರಿಸಿದ್ದ ಮಹಿಳೆಯನ್ನು ರೆಸ್ಟೋರೆಂಟ್ನಲ್ಲಿದ್ದ ಸಿಬ್ಬಂದಿಯೊಬ್ಬರು ತಡೆದ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ಹಿಜಾಬ್ ಗದ್ದಲದ ನಡುವೆ ಈ ಘಟನೆಯು ಭಾರತೀಯ ಸಾಮಾಜಿಕ ಮಾಧ್ಯಮ ಬಳಕೆದಾರರ ಗಮನ ಸೆಳೆದಿದೆ.
ಈ ಸಂಬಂಧ ಬಹ್ರೇನ್ ಪ್ರವಾಸೋದ್ಯಮ ಮತ್ತು ಪ್ರದರ್ಶನ ಪ್ರಾಧಿಕಾರವು ತನಿಖೆ ಪ್ರಾರಂಭಿಸಿದೆ. ಜೊತೆಗೆ ರಾಜ್ಯದ ಕಾನೂನುಗಳನ್ನು ಉಲ್ಲಂಘಿಸುವ ಕ್ರಮಗಳಿಗೆ ಕಡಿವಾಣ ಹಾಕಲು ಎಲ್ಲ ಪ್ರವಾಸೋದ್ಯಮ ಮಳಿಗೆಗಳ ಅಭಿಪ್ರಾಯವನ್ನೂ ಕೇಳಿದೆ. ಮುಸ್ಲಿಮರೇ ಬಹುಸಂಖ್ಯೆಯಲ್ಲಿರುವ ಈ ನಾಡಿನಲ್ಲಿ ರೆಸ್ಟೋರೆಂಟ್ಗಳು ಇಂತಹ ನಿರ್ಧಾರ ಕೈಗೊಳ್ಳುವುದನ್ನು ಬಿಡಬೇಕು ಎಂದು ಸೂಚಿಸಿದೆ.
ಈ ನಡುವೆ ಘಟನೆಗೆ ವಿಷಾದ ವ್ಯಕ್ತಪಡಿಸಿ ರೆಸ್ಟೋರೆಂಟ್ನ ಆಡಳಿತ ಮಂಡಳಿ, ಸಾಮಾಜಿಕ ಮಾಧ್ಯಮದಲ್ಲಿ ಕ್ಷಮೆಯಾಚಿಸಿದೆ. ಕರ್ತವ್ಯದಲ್ಲಿದ್ದ ವ್ಯವಸ್ಥಾಪಕನನ್ನೂ ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಹ್ರೇನ್ನಲ್ಲಿ ನಾವು 35 ವರ್ಷಗಳಿಗೂ ಹೆಚ್ಚು ಕಾಲ ಎಲ್ಲ ದೇಶದವರಿಗೆ ಸೇವೆ ನೀಡುತ್ತಿದ್ದೇವೆ. ಪ್ರತಿಯೊಬ್ಬರಿಗೂ ಲ್ಯಾಂಟರ್ನ್ಸ್ಗೆ ಸ್ವಾಗತವಿದೆ. ಲ್ಯಾಂಟರ್ನ್ಸ್ ಪ್ರತಿಯೊಬ್ಬರೂ ತಮ್ಮ ಕುಟುಂಬದೊಂದಿಗೆ ಆನಂದಿಸಲು ಮನೆಯ ವಾತಾವರಣದಿಂತಿರುವ ಸ್ಥಳವಾಗಿದೆ. ನಮ್ಮ ವ್ಯವಸ್ಥಾಪಕನಿಂದ ತಪ್ಪಾಗಿದೆ. ಅವರನ್ನೂ ಈಗಾಗಲೇ ಅಮಾನತುಗೊಳಿಸಲಾಗಿದೆ. ಅಲ್ಲದೆ, ಪರಿಹಾರವಾಗಿ ಮಾರ್ಚ್ 29ರಂದು ಬಹ್ರೇನ್ನ ಅತಿಥಿಗಳನ್ನು ಲ್ಯಾಂಟರ್ನ್ಸ್ ನಲ್ಲಿ ಕಾಂಪ್ಲಿಮೆಂಟರಿ ಔತಣ ಕೂಟಕ್ಕೂ ಸ್ವಾಗತಿಸುತ್ತೇವೆ ಎಂದು ರೆಸ್ಟೋರೆಂಟ್ ಇನ್ಸ್ಟಾಗ್ರಾಮ್ನಲ್ಲಿ ಸಂದೇಶ ಹಂಚಿಕೊಂಡಿದೆ.
ಇದರ ನಡುವೆ ಈ ಅಚಾತುರ್ಯ ವ್ಯವಸ್ಥಾಪಕನಿಂದ ಆಗಿದ್ದು, ಆತ ಭಾರತೀಯನಲ್ಲ ಎಂಬ ಮಾಹಿತಿ ಹೊರಬಿದ್ದಿದೆ. ಹಾಗಾಗಿ ಇದಕ್ಕೆ ಭಾರತೀಯರನ್ನು ಹೊಣೆ ಮಾಡುವುದು ಸರಿಯಲ್ಲ ಎಂಬ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.