ಐಪಿಎಲ್ ಮೇಲೆ ಉಗ್ರರ ಕರಿನೆರಳು !! | ಆಟಗಾರರ ಹತ್ಯೆಗೆ ನಡೆದಿದೆ ಮಾಸ್ಟರ್ ಪ್ಲಾನ್

ಇನ್ನೆರಡು ದಿನಗಳಲ್ಲಿ ಐಪಿಎಲ್ 2022 ಸೆಟ್ಟೇರಲಿದೆ. ಈ ವರ್ಷ ಐಪಿಎಲ್ ಸರಣಿಯ ಎಲ್ಲಾ ಪಂದ್ಯಗಳು ಮುಂಬೈ, ನವಿ ಮುಂಬೈ ಮತ್ತು ಪುಣೆಯಲ್ಲಿ ನಡೆಯಲಿವೆ. ಆದರೆ ಈ ಸಮಯದಲ್ಲಿ ಐಪಿಎಲ್ ಟೂರ್ನಿ ಉಗ್ರರ ಹಿಟ್ ಲಿಸ್ಟ್ ನಲ್ಲಿದೆ ಎಂಬ ಆಘಾತಕಾರಿ ಮಾಹಿತಿ ಹೊರಬಿದ್ದಿದೆ.

 

ಮುಂಬೈ ಪೊಲೀಸ್ ಮೂಲಗಳ ಪ್ರಕಾರ ಭಯೋತ್ಪಾದನಾ ನಿಗ್ರಹ ದಳ ಓರ್ವ ವ್ಯಕ್ತಿಯನ್ನು ಬಂಧಿಸಿದೆ. ಬಂಧಿತನ ಹೇಳಿಕೆಯ ಆಧಾರದ ಮೇಲೆ ವಾಂಖೆಡೆ ಸ್ಟೇಡಿಯಂ, ಟ್ರೈಡೆಂಟ್ ಹೋಟೆಲ್, ನಾರಿಮನ್ ಪಾಯಿಂಟ್ ಹಾಗೂ ಆಟಗಾರರ ಹೋಟೆಲ್ ಸ್ಟೇಡಿಯಂ ಸುತ್ತಮುತ್ತಲ ಪ್ರದೇಶಗಳ ಮಾಹಿತಿಯನ್ನು ಸಂಗ್ರಹಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಶುರುವಾಗಲು ಇನ್ನೇನು ಎರಡೇ ದಿನ ಬಾಕಿಯಿದೆ. ಆದರೆ ಈ ಹಂತದಲ್ಲಿ ವಿಶ್ವವೇ ತಿರುಗಿ ನೋಡುವ ಕ್ರಿಕೆಟ್ ಸರಣಿಗೆ ಆತಂಕವೊಂದು ಎದುರಾಗಿದೆ. ಅಲ್ಲದೇ ವಾಂಖೆಡೆ ಸ್ಟೇಡಿಯಂ, ಟ್ರೈಡೆಂಟ್ ಹೋಟೆಲ್ ಮತ್ತು ಸುತ್ತಮುತ್ತಲಿನ ರಸ್ತೆಗಳಲ್ಲಿ ಭಯೋತ್ಪಾದಕರು ದಾಳಿ ನಡೆಸಲು ಯೋಜಿಸಿದ್ದಾರೆ ಎಂದು ಸಹ ಮೂಲಗಳು ತಿಳಿಸಿವೆ. ಪಂದ್ಯಾವಳಿಗಾಗಿ ಎಲ್ಲಾ ತಂಡದ ಆಟಗಾರರು ಮತ್ತು ಕೋಚಿಂಗ್ ಸಿಬ್ಬಂದಿ ಮುಂಬೈಗೆ ಆಗಮಿಸಿದ್ದಾರೆ.

ಈ ವರ್ಷದ ಐಪಿಎಲ್‌ನಲ್ಲಿ ಭಯೋತ್ಪಾದಕರ ದಾಳಿಯ ಬಗ್ಗೆ ಮುಂಬೈ ಪೊಲೀಸರಿಗೆ ಎಚ್ಚರಿಕೆ ನೀಡಲಾಗಿದ್ದು, ನಂತರ ಆರ್ಥಿಕ ರಾಜಧಾನಿಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಭಯೋತ್ಪಾದಕರ ಈ ತಪ್ಪೊಪ್ಪಿಗೆ ಹಿನ್ನೆಲೆಯಲ್ಲಿ ಐಪಿಎಲ್ ತಂಡಗಳ ಆಟಗಾರರು ಮತ್ತು ಸಹಾಯಕ ಸಿಬ್ಬಂದಿಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕ್ವಿಕ್ ರೆಸ್ಪಾನ್ಸ್ ಟೀಮ್, ಬಾಂಬ್ ಸ್ಕ್ವಾಡ್, ರಾಜ್ಯ ಮೀಸಲು ಪೊಲೀಸ್ ಪಡೆಗಳನ್ನು ಮಾರ್ಚ್ 26 ರಿಂದ ಮೇ 22 ರವರೆಗೆ ಭದ್ರತೆಗಾಗಿ ನಿಯೋಜಿಸಲಾಗಿದೆ.

ಐಪಿಎಲ್‌ಗೆ ಸಂಬಂಧಿಸಿದ ಫ್ರಾಂಚೈಸಿಗಳು ಮತ್ತು ಸಿಬ್ಬಂದಿಗಳು ಅನುಸರಿಸಬೇಕಾದ ಆಂತರಿಕ ಸುತ್ತೋಲೆಯಲ್ಲಿ ಭದ್ರತಾ ಮಾರ್ಗಸೂಚಿಗಳನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಎಲ್ಲಾ ಕ್ರೀಡಾಂಗಣಗಳು ಮತ್ತು ಆಟಗಾರರು ತಂಗಿರುವ ಹೋಟೆಲ್‌ಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಪಂದ್ಯದ ಅಧಿಕಾರಿಗಳು, ಅಂಪೈರ್‌ಗಳು ಮತ್ತು ಇತರ ಸಿಬ್ಬಂದಿಗೆ ಭದ್ರತೆ ಒದಗಿಸಲಾಗುವುದು ಎಂದು ಈಗಾಗಲೇ ಆದೇಶ ನೀಡಲಾಗಿದೆ.

ಜೊತೆಗೆ ಪಂದ್ಯ ನಡೆಯುವಾಗ ಹೋಟೆಲ್‌ನಿಂದ ಕ್ರೀಡಾಂಗಣಕ್ಕೆ ಹೋಗುವ ಮಾರ್ಗದಲ್ಲಿ ವಾಹನ ನಿಲುಗಡೆಯನ್ನೂ ನಿಷೇಧಿಸಲಾಗಿದೆ. ಜೊತೆಗೆ ಯಾವುದೇ ಪರಿಸ್ಥಿತಿ ಎದುರಿಸಲು ಕ್ಷಿಪ್ರ ಕಾರ್ಯಾಚರಣೆ ಪಡೆ, ಬಾಂಬ್ ಸ್ಕ್ವಾಡ್ ಹಾಗೂ ಮುಂಬೈ ಪೊಲೀಸರ ವಿಶೇಷ ತಂಡವನ್ನು ನಿಯೋಜಿಸುವಂತೆ ಆದೇಶಿಸಲಾಗಿದೆ.

Leave A Reply

Your email address will not be published.