ಹಿಜಾಬ್ ವಿವಾದ : ಅರ್ಜಿ ವಿಚಾರಣೆ ಕುರಿತು ಮತ್ತೆ ತುರ್ತು ವಿಚಾರಣೆ ನಡೆಸಲು ನಿರಾಕರಿಸಿದ ಸುಪ್ರೀಂಕೋರ್ಟ್|
ಮಾ.15 ರಂದು ಹೈಕೋರ್ಟ್ ಹಿಜಾಬ್ ಧರಿಸುವ ವಿಚಾರದಲ್ಲಿ ರಾಜ್ಯ ಸರಕಾರದ ಆದೇಶವನ್ನೇ ಎತ್ತಿ ಹಿಡಿದು ತೀರ್ಪು ನೀಡುತ್ತಿದ್ದಂತೆಯೇ, ಈ ತೀರ್ಪನ್ನು ಪ್ರಶ್ನಿಸಿ ಹಲವಾರು ಮಂದಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಅದರ ತುರ್ತು ವಿಚಾರಣೆಗೆ ಸುಪ್ರೀಂ ನಿರಾಕರಿಸಿದೆ.
ಇದರ ವಿಚಾರಣೆ ತುರ್ತಾಗಿ ನಡೆಯಬೇಕಿರುವ ಹಿನ್ನೆಲೆಯಲ್ಲಿ ಕೂಡಲೇ ವಿಚಾರಣೆ ನಡೆಸಿ ಎಂದು ಮೇಲ್ಮನವಿದಾರರ ಪರ ವಕೀಲರು ಸುಪ್ರೀಂ ಕೋರ್ಟ್ ನನ್ನು ಕೋರಿದ್ದರು. ಆದರೆ ಸುಪ್ರೀಂಕೋರ್ಟ್ ಈ ಅರ್ಜಿಯ ವಿಚಾರಣೆಯನ್ನು ಹೋಳಿ ಹಬ್ಬ ಮುಗಿದ ಮೇಲೆ ನಡೆಸುವುದಾಗಿ ಎಂದು ಪೀಠ ಹೇಳಿತ್ತು.
ಇಂದು ಅದರ ವಿಚಾರಣೆ ಮತ್ತೆ ಕೋರ್ಟ್ ಮುಂದೆ ಬಂದಿತ್ತು. ಪುನಃ ವಕೀಲರು ಪರೀಕ್ಷೆಯ ಕಾರಣ ಕೊಟ್ಟರು. ಪರೀಕ್ಷೆಗಳು ಸಮೀಪಿಸುತ್ತಿವೆ. ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಶಾಲೆಗಳಿಗೆ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ. ಅವರ ಒಂದು ವರ್ಷ ವ್ಯರ್ಥವಾಗುತ್ತಿದೆ. ಆದುದರಿಂದ ತುರ್ತಾಗಿ ವಿಚಾರಣೆ ನಡೆಸಿ ಎಂದು ವಕೀಲ ದೇವದತ್ ಕಾಮತ್ ಮನವಿ ಮಾಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ‘ಇದಕ್ಕೂ ಪರೀಕ್ಷೆಗೂ ಯಾವುದೇ ಸಂಬಂಧವಿಲ್ಲ. ಸಮಸ್ಯೆಯನ್ನು ಸೂಕ್ಷ್ಮಗೊಳಿಸಬೇಡಿ’ ಎಂದು ಹೇಳಿದರಲ್ಲದೆ ‘ಮುಂದಿನ ಪ್ರಕರಣದ ಕಡೆ ನಡೆಯಿರಿ’ ಎಂದು ಹೇಳುವ ಮೂಲಕ ತುರ್ತು ಅರ್ಜಿಯ ವಿಚಾರಣೆ ಇಲ್ಲ ಎಂಬ ಸಂಗತಿಯನ್ನು ಪರೋಕ್ಷವಾಗಿ ಹೇಳಿದರು.