ಎಲ್ಲಾ ಕಾರ್ಮಿಕರ ತಿಂಗಳ ಸಂಬಳ 10685 ರೂಪಾಯಿಗಿಂತ ಕಡಿಮೆ ನೀಡುವಂತಿಲ್ಲ|ಯಾವ್ಯಾವ ಕೆಲಸಕ್ಕೆ ಎಷ್ಟು ವೇತನ ಕಡ್ಡಾಯ ಎಂಬ ಮಾಹಿತಿ ಇಲ್ಲಿದೆ..
ಕಾರ್ವಿುಕರಿಗೆ ಸೇವಾ ಭದ್ರತೆ ಕಲ್ಪಿಸುವ ಉದ್ದೇಶದಿಂದ, ‘ಕನಿಷ್ಠ ವೇತನ’ ನಿಗದಿಪಡಿಸಿ ರಾಜ್ಯ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿದ್ದು, ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿದೆ. ಈಗಾಗಲೆ 17 ರಾಜ್ಯಗಳಲ್ಲಿ ಜಾರಿಗೆ ತರಲಾಗಿರುವ ಈ ಸಂಹಿತೆಗಳು ಶೀಘ್ರವಾಗಿ ರಾಜ್ಯದಲ್ಲೂ ಅನುಷ್ಠಾನಗೊಳ್ಳಲಿವೆ.
ಕೆಲವೇ ದಿನಗಳಲ್ಲಿ ಹೊಸ ಕಾಯ್ದೆ ಜಾರಿಯಾಗಲಿದ್ದು, ತಿಂಗಳಿಗೆ ಕನಿಷ್ಠ ವೇತನ 10,685 ರೂ. (ತುಟ್ಟಿಭತ್ಯೆ ಹೊರತುಪಡಿಸಿ) ನಿಗದಿಪಡಿಸಿದೆ. ರಾಜ್ಯಾದ್ಯಂತ ಭದ್ರತಾ ಏಜೆನ್ಸಿಗಳಲ್ಲಿ ಕೆಲಸ ಮಾಡುವ, ಏಜೆನ್ಸಿಗಳ ಮೂಲಕ ನೇಮಕ ಮಾಡಿಕೊಳ್ಳುವ ಎಲ್ಲ ಸಿಬ್ಬಂದಿ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ಕ್ಷೇತ್ರದ (ಉತ್ಪಾದನೆ, ಅಸೆಂಬ್ಲಿಂಗ್, ಬಾಡಿ ಬಿಲ್ಡಿಂಗ್, ಸರ್ವೀಸಿಂಗ್ ಹಾಗೂ ರಿಪೇರಿ ಕೆಲಸಗಳ ಸಹಿತ) ಉದ್ಯೋಗದಲ್ಲಿರುವ ಕಾರ್ವಿುಕರಿಗೆ ಅನುಕೂಲವಾಗಲಿದೆ. ಇದಕ್ಕಾಗಿ ಕನಿಷ್ಠ ವೇತನ ಕಾಯ್ದೆ-1948ರ ಅನ್ವಯ ರಾಜ್ಯಕ್ಕೆ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ ಕರಡು ಅಧಿಸೂಚನೆಯನ್ನು ಹೊರಡಿಸಲಾಗಿದೆ.
ಸಂಬಳ ಎಷ್ಟಿರಬೇಕು?:
ಸೆಕ್ಯುರಿಟಿ ಆಫೀಸರ್, ಫೀಲ್ಡ್ ಆಫೀಸರ್ ಮತ್ತು ಅತಿ ಕುಶಲ ವರ್ಗದ ಕೆಲಸಕ್ಕೆ ವಲಯ-1ರಲ್ಲಿ ದಿನಕ್ಕೆ ಕನಿಷ್ಠ 668.68 ರೂ. ತಿಂಗಳಿಗೆ 17,385 ರೂ. ಇದ್ದರೆ, ವಲಯ-4ರಲ್ಲಿ ದಿನಕ್ಕೆ 577.63 ರೂ. ತಿಂಗಳಿಗೆ ಕನಿಷ್ಠ 15018 ರೂ. ನಿಗದಿ ಮಾಡಲಾಗಿದೆ.
ಅಕುಶಲ ಕಾರ್ವಿುಕರಿಗೆ ಈ ಮೊತ್ತವು ದಿನಕ್ಕೆ 445.77 ತಿಂಗಳಿಗೆ 11,590 ರೂ. (ವಲಯ-1) ನಿಗದಿ ಮಾಡಲಾಗಿದೆ.
ಇನ್ನು ಕಚೇರಿ ಸಿಬ್ಬಂದಿ ಮ್ಯಾನೇಜರ್ ಸ್ತರದ ಕೆಲಸಕ್ಕೆ ದಿನಕ್ಕೆ 702 ರೂ., ತಿಂಗಳಿಗೆ 18,254.90 ರೂ. ಇದೆ. ವಲಯ-4ರಲ್ಲಿ ಈ ಮೊತ್ತ ದಿನಕ್ಕೆ 606.51 ರೂ., ತಿಂಗಳಿಗೆ 15,769 ರೂ. ನೀಡಬೇಕು ಎಂದು ತಿಳಿಸಲಾಗಿದೆ. ಇದಕ್ಕಿಂತ ಕೆಳಹಂತದ ಸಿಬ್ಬಂದಿಗೆ ದಿನಕ್ಕೆ 577ರಿಂದ 668ರವರೆಗೆ, ತಿಂಗಳಿಗೆ 15,018-17,385 ರೂ.ಗಳವರಗೆ ನಿಗದಿ ಮಾಡಲಾಗಿದೆ.
ಔದ್ಯೋಗಿಕ ವಲಯದ ಉದ್ಯೋಗಿಗಳು:
ಫೋರ್ವುನ್ನಿಂದ ಕ್ಲೀನರ್, ಸ್ವೀಪರ್ ಹುದ್ದೆಗಳನ್ನು ಇದರಲ್ಲಿ ಪರಿಗಣಿಸಲಾಗಿದ್ದು, ಅತಿಕುಶಲ ಕಾರ್ವಿುಕರಿಗೆ ದಿನಕ್ಕೆ 476.31ರಿಂದ 663 ರೂ. ತಿಂಗಳಿಗೆ 12,384 ರೂ.ಗಳಿಂದ 17,238 ರೂ.ವರೆಗೆ ಕನಿಷ್ಠ ವೇತನ ಇರಲಿದೆ. ಇನ್ನುಳಿದ ವರ್ಗದ ಕಾರ್ವಿುಕರಿಗೆ ಅಂದರೆ ಜವಾನ, ವಾಚ್ವುನ್, ಲಿಫ್ಟ್ ಆಪರೇಟರ್, ಸಹಾಯಕ, ದಲಾಯತ್ ಕೆಲಸದವರಿಗೆ ದಿನಕ್ಕೆ 410.97 ರೂ.ಗಳಿಂದ 552.53 ರೂ. ತಿಂಗಳಿಗೆ 10,685ರೂ. ಗಳಿಂದ 14,365 ರೂ. ವೇತನ ನೀಡತಕ್ಕದ್ದು.
ದಿನಗೂಲಿಗೂ ತುಟ್ಟಿಭತ್ಯೆ ಅನ್ವಯ:
ಕನಿಷ್ಠ ವೇತನದೊಂದಿಗೆ ತುಟ್ಟಿಭತ್ಯೆ ಪಾವತಿಸತಕ್ಕದ್ದು. ಇದಕ್ಕೆ ಪಾಲಿಸಬೇಕಾದ ಗ್ರಾಹಕ ಸೂಚ್ಯಂಕ ಲೆಕ್ಕಾಚಾರದ ಸೂತ್ರವನ್ನು ನೀಡಲಾಗಿದೆ. ಇದು ದಿನಗೂಲಿ ಲೆಕ್ಕದಲ್ಲಿ ಕೆಲಸ ಮಾಡುವ ಕಾರ್ವಿುಕರಿಗೂ ಅನ್ವಯವಾಗಲಿದೆ.
ರಜಾ ದಿನಕ್ಕೆ ಎರಡು ಪಟ್ಟು ವೇತನ:
ತುಂಡು ಆಧಾರದ ಮೇಲೆ 8 ಗಂಟೆ ಕೆಲಸ ಮಾಡುವ ಕಾರ್ವಿುಕರ ವೇತನವು ಅದೇ ಕೆಲಸ ಮಾಡುವ ಕಾರ್ವಿುಕರ ಒಂದು ದಿನದ ವೇತನದ ಕೆಲಸಕ್ಕಿಂತ ಕಡಿಮೆ ಇರಕೂಡದು. ಅಂತೆಯೇ, ವಾರದ ರಜಾ ದಿನ ಹಾಗೂ ಹಬ್ಬದ ದಿನಗಳಂದು ಕೆಲಸ ಮಾಡುವ ಕಾರ್ವಿುಕರಿಗೆ ಸಾಮಾನ್ಯ ವೇತನದ ಎರಡು ಪಟ್ಟು ವೇತನ ನೀಡತಕ್ಕದ್ದು. ದಿನದ ಅವಧಿಗಿಂತ ಹೆಚ್ಚು ಕೆಲಸ ಮಾಡಿದಲ್ಲಿ, ಅಂಥ ಹೆಚ್ಚುವರಿ ಅವಧಿ ಕೆಲಸಕ್ಕೆ ಆತನ ವೇತನದ ಎರಡು ಪಟ್ಟು ವೇತನ ಪಾವತಿಸಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಇನ್ನು, ಟ್ರೇನಿಗಳಿಗೆ ಆ ವರ್ಗದ ವೇತನದಾರರು ಪಡೆಯುತ್ತಿರುವ ಮೊತ್ತದ ಶೇ.75 ಸಂಬಳ ನೀಡಬೇಕು. ವೇತನವನ್ನು ಚೆಕ್ ಮೂಲಕ ಅಥವಾ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡತಕ್ಕದ್ದು.
ಸಮಾನ ವೇತನ:
ಮಹಿಳೆಯರು, ಪುರುಷರು ಹಾಗೂ ತೃತೀಯ ಲಿಂಗಿಗಳು ಒಂದೇ ರೀತಿಯ ಕೆಲಸವನ್ನು ನಿರ್ವಹಿಸಿದ ಸಂದರ್ಭದಲ್ಲಿ ಎಲ್ಲರಿಗೂ ಸಮಾನ ದರದ ವೇತನ ಪಾವತಿಸತಕ್ಕದ್ದು. ಅಧಿಸೂಚನೆಯಲ್ಲಿ ಯಾವುದಾದರೂ ಕಾರ್ವಿುಕವರ್ಗವನ್ನು ನಮೂದಿಸದೇ ಇದ್ದಲ್ಲಿ, ಅದೇ ಸ್ವರೂಪದ ಕೆಲಸ ಮಾಡುತ್ತಿರುವ ಇತರ ಸಿಬ್ಬಂದಿಗೆ ನಿಗದಿಪಡಿಸಲಾದ ಮೊತ್ತವನ್ನೇ ನೀಡಬೇಕಾಗುತ್ತದೆ.
ತುಟ್ಟಿ ಭತ್ಯೆ ಪರಿಷ್ಕರಣೆ:
ಗ್ರಾಹಕರ ಬೆಲೆ ಸೂಚ್ಯಂಕದ ಪ್ರಕಾರ 2022-23ನೇ ಸಾಲಿಗೆ 425 ಅಂಕಗಳಷ್ಟು ಏರಿಕೆ ದಾಖಲಿಸಲಾಗಿದೆ. ಇದರ ಪ್ರಕಾರ 510 ರೂ. ತುಟ್ಟಿಭತ್ಯೆ ನಿಗದಿ ಮಾಡಬೇಕಾಗುತ್ತದೆ. ಆದರೆ, ಈ ಸೂಚ್ಯಂಕಕ್ಕೂ ಬೆಲೆಯೇರಿಕೆಗೂ ಭಾರಿ ವ್ಯತ್ಯಾಸವಿರುತ್ತದೆ ಎನ್ನುವುದು ಕಾರ್ವಿುಕರ ವಾದ. ದೇಶಾದ್ಯಂತ ಎಲ್ಲ ರಾಜ್ಯಗಳು ಇದೇ ಮಾದರಿಯನ್ನು ಕನಿಷ್ಠ ವೇತನ ನಿಗದಿಗೆ ಪರಿಗಣಿಸುತ್ತವೆ. ಪ್ರತಿ ಐದು ವರ್ಷಗಳಿಗೊಮ್ಮೆ ಕನಿಷ್ಠ ವೇತನವನ್ನು ಪರಿಷ್ಕರಿಸಲಾಗುತ್ತದೆ ಎಂದು ಸಚಿವ ಹೆಬ್ಬಾರ್ ಮಾಹಿತಿ ನೀಡಿದ್ದಾರೆ.
2015ರಲ್ಲಿ ಅಕುಶಲ ಕೆಲಸಗಾರರಿಗೆ ದಿನಕ್ಕೆ ಕನಿಷ್ಠ 350ರಿಂದ 380 ರೂ. ತಿಂಗಳಿಗೆ 9100-10,010 ರೂ. ಇತ್ತು. ಇನ್ನು ಕುಶಲ ಕೆಲಸಗಾರರಾದ ಮ್ಯಾನೇಜರ್ ಹುದ್ದೆಯವರಿಗೆ ದಿನಕ್ಕೆ 414-511 ರೂ. ಹಾಗೂ ತಿಂಗಳಿಗೆ 12,064 ರಿಂದ 13,286 ರೂ.ವರೆಗೆ ನಿಗದಿ ಮಾಡಲಾಗಿತ್ತು.