ಪ್ರಶ್ನೆಪತ್ರಿಕೆಯ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯ !! | ದ್ವಿತೀಯ ಪಿಯುಸಿ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಎಡವಟ್ಟು ಮಾಡಿಕೊಂಡ ಪಿಯು ಮಂಡಳಿ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಈಗ ಪೂರ್ವ ಸಿದ್ಧತಾ ಪರೀಕ್ಷೆಗಳು ನಡೆಯುತ್ತಿವೆ. ಹೀಗಿರುವಾಗ ಶನಿವಾರ ನಡೆದ ಪರೀಕ್ಷೆಯಲ್ಲಿ ಮಕ್ಕಳಿಗೆ ಪದವಿಪೂರ್ವ ಶಿಕ್ಷಣ ಇಲಾಖೆ ನೀಡಿದ ಇತಿಹಾಸ ಪ್ರಶ್ನೆಪತ್ರಿಕೆಯ ಭಾರತದ ಭೂಪಟದಲ್ಲಿ ಅರ್ಧ ಕಾಶ್ಮೀರವೇ ಮಾಯವಾಗಿದೆ!!
ಕಾಶ್ಮೀರದ ತುಂಡು ನೆಲವನ್ನು ಬಿಟ್ಟುಕೊಡುವ ವಿಷಯವನ್ನು ಭಾರತೀಯರು ಎಂದಿಗೂ ಸಹಿಸಲಾರರು. ವಿಷಯ ದೇಶಾದ್ಯಂತ ಜೀವಂತ ಇರುವಾಗಲೇ ಪಿಯ ಮಂಡಳಿ ಈ ಎಡವಟ್ಟು ಮಾಡಿದೆ.
ನಿಮಗೆ ಒದಗಿಸಿರುವ ಭಾರತದ ಭೂಪಟದಲ್ಲಿ ಈ ಕೆಳಗಿನ ಯಾವುದಾದರೂ ಐದು ಐತಿಹಾಸಿಕ ಸ್ಥಳಗಳನ್ನು ಗುರುತಿಸಿ ಮತ್ತು ಗುರುತಿಸಿದ ಪ್ರತಿಯೊಂದು ಸ್ಥಳದ ಬಗ್ಗೆ ಎರಡು ವಾಕ್ಯಗಳಲ್ಲಿ ವಿವರಣೆ ಬರೆಯಿರಿ ಎಂಬುದು ಪ್ರಶ್ನೆಪತ್ರಿಕೆಯಲ್ಲಿ ವಿದ್ಯಾರ್ಥಿಗಳಿಗೆ ಕೇಳಲಾದ ಪ್ರಶ್ನೆ. ಜೊತೆಗೆ ಒದಗಿಸಿದ ಭಾರತದ ಭೂಪಟದಲ್ಲಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಕೈಬಿಡಲಾಗಿದೆ. ಸಾಮಾನ್ಯವಾಗಿ ವರ್ಷಂಪ್ರತಿ ಪಿಯು ಇತಿಹಾಸ ವಿಭಾಗದ ಉಪನ್ಯಾಸಕರ ಸಂಘದ ಮೇಲುಸ್ತುವಾರಿಯಲ್ಲೇ ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸಿದ್ಧವಾಗುತ್ತದೆ. ಆದರೆ ಈ ವರ್ಷ ಪಿಯು ಮಂಡಳಿ ಸೂಚನೆಯಂತೆ ಪ್ರಶ್ನೆಪತ್ರಿಕೆ ಜವಾಬ್ದಾರಿಯನ್ನು ಪ್ರಾಂಶುಪಾಲರು ಮತ್ತು ಉಪನ್ಯಾಸಕರ ಸಂಘಕ್ಕೆ ವಹಿಸಲಾಗಿತ್ತು.
ಆಗಿರುವ ಪ್ರಮಾದದ ಬಗ್ಗೆ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರ ಹಂತದಲ್ಲಿ ಚರ್ಚೆ ಶುರುವಾಗುತ್ತಿದ್ದು, ಪ್ರತಿಭಟನೆ ಸಿದ್ಧತೆ ನಡೆಯುತ್ತಿದೆ. ಆದರೆ ಅಧಿಕಾರಿ ವರ್ಗ ಈ ಬಗ್ಗೆ ಆಕ್ಷೇಪ ಅಥವಾ ದೂರು ಬಂದಿಲ್ಲ ಎಂದು ಪ್ರತಿಕ್ರಿಯಿಸಿದೆ.