ತಮ್ಮ ಸ್ವಂತ ಜಮೀನು ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾದ ಕನ್ನಡದ ಹಿರಿಯ ನಟಿ !! | ಕರಾವಳಿಯ ಹೆಮ್ಮೆಯ ನಟಿಯ ಈ ನಡೆಗೆ ಬಹುಪರಾಕ್ ಎಂದ ಕರುನಾಡು
ಇತ್ತೀಚೆಗೆ ಸೆಲೆಬ್ರಿಟಿಗಳು ಸಮಾಜಸೇವೆಯಲ್ಲಿ ಪಾಲ್ಗೊಳ್ಳುತ್ತಿರುವುದು ಮಾಮೂಲಾಗಿದೆ. ಅದು ಕೂಡ ತಮ್ಮ ದುಡಿಮೆಯ ಕಾಲುಭಾಗದಷ್ಟು ಸಮಾಜಸೇವೆಗೆ ಮೀಸಲಿಟ್ಟಿರಬಹುದು. ಆದರೆ ಇಲ್ಲೊಬ್ಬ ಕನ್ನಡದ ಹಿರಿಯ ನಟಿ ತಮ್ಮ ಸ್ವಂತ ಜಮೀನನ್ನೇ ಮಾರಿ ಆಸ್ಪತ್ರೆ ನಿರ್ಮಿಸಲು ಮುಂದಾಗಿದ್ದಾರೆ. ಆಕೆ ಬೇರಾರು ಅಲ್ಲ, ಕರಾವಳಿಯ ಹೆಮ್ಮೆಯ ನಟಿ ಲೀಲಾವತಿ.
ಹಿರಿಯ ನಟಿ ಲೀಲಾವತಿ ಅವರು ತಮ್ಮ ಸ್ವಂತ ಜಮೀನು ಮಾರಿ, ಬೆಂಗಳೂರು ಗ್ರಾಮಾಂತರದ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯಲ್ಲಿ ಪ್ರಾಥಮಿಕ ಆಸ್ಪತ್ರೆಗೆ ನಿರ್ಮಿಸಲು ಮುಂದಾಗಿದ್ದಾರೆ. ಲೀಲಾವತಿ ಅವರ ಈ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದ್ದು, ಹಿರಿಯ ನಟಿಯ ಈ ಸಮಾಜಮುಖಿ ಕೆಲಸಕ್ಕೆ ಕರುನಾಡೇ ಭೇಷ್ ಎಂದಿದೆ.
ಈ ಮೊದಲು ಇದೇ ಗ್ರಾಮದಲ್ಲಿಯೇ ಲೀಲಾವತಿ ಮತ್ತು ಪುತ್ರ ವಿನೋದ್ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿದ್ದರು. ಒಬ್ಬರು ವೈದ್ಯರನ್ನು ಕೊಡಿ ಎಂದು ಸರಕಾರಕ್ಕೆ ಹಲವು ಮನವಿಗಳನ್ನೂ ಸಲ್ಲಿಸಿದ್ದರು. ಕೊನೆಗೆ ವೈದ್ಯರಿಗೂ ತಾವೇ ಸಂಬಳ ಕೊಟ್ಟೂ, ಆರೋಗ್ಯ ಕೇಂದ್ರವನ್ನು ನೋಡಿಕೊಳ್ಳುವಂತೆ ಮಾಡಿದ್ದರು. ಇದೀಗ ತಮ್ಮ ಸ್ವಂತ ಹಣದಲ್ಲಿ ಅಲ್ಲಿಯೇ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದ್ದಾರೆ.
ಆಸ್ಪತ್ರೆಯ ನಿರ್ಮಾಣದ ಕೆಲಸ ಈಗಾಗಲೇ ಶುರುವಾಗಿದೆ. ಮೊನ್ನೆಯಷ್ಟೇ ಭೂಮಿ ಪೂಜೆಯನ್ನು ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಕುಮಾರ್ ಮತ್ತು ನೆಲಮಂಗಲದ ಶಾಸಕ ಡಾ.ಕೆ ಶ್ರೀನಿವಾಸ ಮೂರ್ತಿ ಮಾಡಿದ್ದಾರೆ. ಸರಕಾರದ ಕಡೆಯಿಂದ ಸೌಲಭ್ಯ ಕೊಡಿಸುವುದಾಗಿಯೂ ಶಾಸಕರು ಹೇಳಿದ್ದಾರೆ. ಆದರೂ, ಲೀಲಾವತಿ ಅವರು 50 ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಪ್ರಾಥಮಿಕ ಆಸ್ಪತ್ರೆಯನ್ನು ನಿರ್ಮಿಸಲು ಯೋಜನೆ ಹಾಕಿಕೊಂಡಿದ್ದಾರೆ.
ಈ ಆಸ್ಪತ್ರೆಯ ನಿರ್ಮಾಣಕ್ಕಾಗಿ ಅವರು ಚೆನ್ನೈನಲ್ಲಿರುವ ತಮ್ಮ ಸ್ವಂತ ಜಮೀನನ್ನು ಮಾರಾಟ ಮಾಡಲೂ ಮುಂದಾಗಿದ್ದಾರೆ. ಲೀಲಾವತಿ ಅವರಿಗೆ ಆರೋಗ್ಯ ಸರಿಯಿಲ್ಲದ ಕಾರಣ, ಅಂದು ಭೂಮಿ ಪೂಜೆ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು. ಆದರೂ, ಮನೆಯಿಂದಲೇ ಈ ಸಮಾಜದ ಋಣ ತೀರಿಸಲು ನಾನು ಸದಾ ಸಿದ್ಧವೆಂಬ ಸಂದೇಶ ಕಳುಹಿಸಿದ್ದರು.