ಬರಿಗಾಲಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದು ಪ್ರಧಾನಿ, ರಾಷ್ಟ್ರಪತಿಗೆ ಮಂಡಿಯೂರಿ ನಮಸ್ಕರಿಸಿದ 125 ವರ್ಷದ ಯೋಗಗುರು !! | ಪದ್ಮ ಪ್ರಶಸ್ತಿ ಸ್ವೀಕಾರಕ್ಕೂ ಮುನ್ನ ತನ್ನ ಮುಗ್ಧತೆಯಿಂದ ದೇಶವಾಸಿಗಳ ಮನಗೆದ್ದ ಯೋಗಿ-ವೀಡಿಯೋ ವೈರಲ್
ಸಂಸ್ಕಾರ ಮತ್ತು ಸಂಸ್ಕೃತಿಯಲ್ಲಿ ಭಾರತ ಪ್ರಪಂಚಕ್ಕೆ ಮಾದರಿಯಾಗಿದೆ. ನಮ್ಮ ದೇಶದಲ್ಲಿನ ಸಂಸ್ಕೃತಿ ಬೇರೆ ಯಾವುದೇ ದೇಶದಲ್ಲೂ ಕಾಣಲು ಸಿಗುವುದಿಲ್ಲ. ನಿನ್ನೆ ರಾಷ್ಟ್ರಪತಿ ಭವನದಲ್ಲಿ ನಡೆದ ಘಟನೆಯೊಂದು ಭಾರತದ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ.
ರಾಷ್ಟ್ರಪತಿ ಭವನದಲ್ಲಿ ನಿನ್ನೆ ನಡೆದ ಪದ್ಮ ಪ್ರಶಸ್ತಿ ಪುರಸ್ಕಾರ ಸಮಾರಂಭ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾಯಿತು. ವಾರಣಾಸಿಯ 125 ವರ್ಷ ವಯಸ್ಸಿನ ಯೋಗ ಗುರು ಸ್ವಾಮಿ ಶಿವಾನಂದ ಅವರು ರಾಷ್ಟ್ರಪತಿ ಭವನದ ದರ್ಬಾರ್ ಹಾಲ್‌ನಲ್ಲಿ ಬರಿಗಾಲಿನಲ್ಲಿ ನಡೆದು ಬರುತ್ತಿದ್ದಂತೆಯೇ ಸಭಾಂಗಣದಲ್ಲಿದ್ದವರೆಲ್ಲ ಎದ್ದು ನಿಂತು ಗೌರವ ಸಲ್ಲಿಸಿದರು. ಆ ವ್ಯಕ್ತಿ ಪ್ರಧಾನಿ ಬಳಿ ಬಂದವರೇ ಮಂಡಿಯೂರಿ ನಮಸ್ಕರಿಸಿದರು. ಪ್ರಧಾನಿ ನರೇಂದ್ರ ಮೋದಿ ಸಹ ಎದ್ದು ನಿಂತು ಶಿರಬಾಗಿ ಪ್ರತಿವಂದಿಸಿದರು. ಈ ವೀಡಿಯೋ ಇದೀಗ ಭಾರತೀಯ ಸಂಸ್ಕೃತಿ ಎಂಬ ಶೀರ್ಷಿಕೆಯೊಂದಿಗೆ ವೈರಲ್ ಆಗುತ್ತಿದೆ.
ಆಸನದಿಂದ ಎದ್ದು ಕೆಳಗಿಳಿದು ಬಂದ ರಾಷ್ಟ್ರಪತಿ, ಎದ್ದೇಳಲು ಶಿವಾನಂದ ಅವರಿಗೆ ನೆರವಾದರಲ್ಲದೇ ಪ್ರಶಸ್ತಿ ಪ್ರದಾನ ಮಾಡಿದರು. ಇನ್ನು ಸ್ವಾಮಿ ಶಿವಾನಂದ ಅವರು ಮಂಡಿಯೂರಿ ನಮಸ್ಕರಿಸುವ ವೀಡಿಯೋ ವೈರಲ್ ಆಗುತ್ತಿದ್ದು, ನೆಟ್ಟಿಗರು ಭಾರೀ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಜನರಲ್ ಬಿಪಿನ್ ರಾವತ್, ಗೀತಾ ಪ್ರೆಸ್ ಮಾಲೀಕರಿಗೆ ಮರಣೋತ್ತರ ಪದ್ಮವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಂಗ್ರೆಸ್ ಹಿರಿಯ ನಾಯಕ, ಪದ್ಮಭೂಷಣ ಗುಲಾಂ ನಬಿ ಆಜಾದ್ ಸೇರಿ ಒಟ್ಟು 63 ಗಣ್ಯರಿಗೆ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಸೇರಿದಂತೆ ಎರಡು ಪದಕ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಶೂಟರ್ ಅವನಿ ಲೇಖರಾ ಅವರು ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದರು. ಜೊತೆಗೆ ಹಾಕಿ ಕ್ರೀಡಾಪಟು ವಂದನಾ ಕಟಾರಿಯಾ ಪ್ರಶಸ್ತಿ ಪಡೆದರು.