ಮೂರು ಕೃಷಿ ಕಾಯ್ದೆಗಳಿಗೆ ಶೇ.86 ರೈತ ಸಂಘಟನೆಗಳು ಬೆಂಬಲ ಸೂಚಿಸಿದ್ದವು !! | ‘ಸುಪ್ರೀಂ’ ನೇಮಕ ಮಾಡಿದ್ದ ಸಮಿತಿಯಿಂದ ಸ್ಫೋಟಕ ಮಾಹಿತಿ ಬಹಿರಂಗ
ಕೇಂದ್ರದ ಮೂರು ಕೃಷಿ ಕಾಯ್ದೆಗಳ ಕುರಿತು ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ರೈತರ ತೀವ್ರ ವಿರೋಧದಿಂದಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಹಿಂಪಡೆದ 3 ಕೃಷಿ ಕಾಯ್ದೆಗಳ ಪರವಾಗಿ ದೇಶದ ಶೇ.86 ರೈತ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ ಎಂಬ ಮಾಹಿತಿ ಅಧ್ಯಯನಕ್ಕಾಗಿ ಸುಪ್ರೀಂ ಕೋರ್ಟ್ ನೇಮಕ ಮಾಡಿದ್ದ ಸಮಿತಿಯ ವರದಿಯಿಂದ ಬಹಿರಂಗಗೊಂಡಿದೆ.
ಕಳೆದ ವರ್ಷ ಅಂದರೆ 2021 ರ ಮಾರ್ಚ್ 19ರಂದು ಸಮಿತಿಯು ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಿತ್ತು. ವರದಿಯ ಅಂಶಗಳು ಇದೀಗ ಈಗ ಬಹಿರಂಗಗೊಂಡಿವೆ. ಮೂರು ಕೃಷಿ ಕಾನೂನುಗಳಿಗೆ ಬೆಂಬಲ ವ್ಯಕ್ತಪಡಿಸಿರುವ ಶೇ. 86 ರೈತ ಸಂಘಟನೆಗಳು ಸುಮಾರು 3 ಕೋಟಿ ರೈತರು ಪ್ರತಿನಿಧಿಸುತ್ತವೆ ಎಂದು ಸಮಿತಿ ತಿಳಿಸಿದೆ. ಈ ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ತುಂಬಾ ಅನುಕೂಲ ಆಗಲಿದ್ದು, ಅವುಗಳನ್ನು ಹಿಂಪಡೆಯಬಾರದು. ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ಅವುಗಳನ್ನು ಅನುಷ್ಠಾನಗೊಳಿಸಬಹುದು ಎಂದು ಸಮಿತಿ ತನ್ನ ವರದಿಯಲ್ಲಿ ಶಿಫಾರಸು ಮಾಡಿತ್ತು ಎಂಬುದು ಈಗ ತಿಳಿದು ಬಂದಿದೆ.
ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ಕ್ರಮದಿಂದ, ಕಾಯ್ದೆಗಳನ್ನು ಬೆಂಬಲಿಸುವ ಬಹುಸಂಖ್ಯಾತ ರೈತರಿಗೆ ಅನ್ಯಾಯವಾಗಲಿದೆ ಎಂಬ ಅಂಶವನ್ನು ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಬೆಂಬಲ ಬೆಲೆಗೆ ಕಾನೂನು ಮಾನ್ಯತೆ ನೀಡುವ ಸ್ವಾತಂತ್ರ್ಯವನ್ನು ರಾಜ್ಯಗಳಿಗೆ ನೀಡಬೇಕು ಎಂಬುದು ಸೇರಿದಂತೆ ಈ ಕಾಯ್ದೆಯಲ್ಲಿ ಮತ್ತಿತ್ತರ ಬದಲಾವಣೆಗಳನ್ನು ಮಾಡಬೇಕು ಎಂದು ಮೂವರು ಸದಸ್ಯರ ಸಮಿತಿ ಸಲಹೆ ನೀಡಿತ್ತು.
ವರದಿಯನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಸಮಿತಿಯ ಸದಸ್ಯ ಅನಿಲ್ ಗಣಾವತ್, ಈ ವರದಿಯನ್ನು ಸಾರ್ವಜನಿಕಗೊಳಿಸಲು ಸುಪ್ರೀಂ ಕೋರ್ಟ್ಗೆ 3 ಬಾರಿ ಪತ್ರ ಬರೆದಿದ್ದೆವು. ಆದರೆ ಸುಪ್ರೀಂ ಕೋರ್ಟ್ನಿಂದ ನಮಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ. ಈ ಕಾಯ್ದೆಗಳನ್ನು ಹಿಂಪಡೆಯಲಾದ ಕಾರಣ ಈಗ ವರದಿಗೆ ಯಾವುದೇ ಮಹತ್ವವಿಲ್ಲ. ಇದೇ ಕಾರಣಕ್ಕೆ ವರದಿಯ ಸಾರಂಶವನ್ನು ಬಿಡುಗಡೆಗೊಳಿಸಿದ್ದೇನೆ ಎಂದು ತಿಳಿಸಿದ್ದಾರೆ.
ಮೂರು ಕೃಷಿ ಕಾಯ್ದೆಗಳ ಅನುಷ್ಠಾನಕ್ಕೆ ತಡೆ ನೀಡಿ ಸುಪ್ರೀಂ ಕೋರ್ಟ್ 2020 ರ ಜನವರಿಯಲ್ಲಿ ಮೂವರು ಸದಸ್ಯರನ್ನೊಳಗೊಂಡ ಸಮಿತಿಯನ್ನು ರಚಿಸಿತ್ತು. ಕೃಷಿ ಅರ್ಥಶಾಸ್ತ್ರಜ್ಞ ಅಶೋಕ್ ಗುಲಾಟಿ, ಶೆಟ್ಕರಿ ಸಂಘಟನೆ ಅಧ್ಯಕ್ಷ ಅನಿಲ್ ಗಣಾವತ್, ಅಂತಾರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯ ಪ್ರಮೋದ್ ಕುಮಾರ್ ಜೋಶಿ ಸಮಿತಿಯಲ್ಲಿದ್ದರು.
ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹಲವು ರಾಜ್ಯಗಳ ರೈತ ಸಂಘಟನೆಗಳು ದೆಹಲಿ ಗಡಿ ಭಾಗಗಳಲ್ಲಿ ನಿರಂತರ ಪ್ರತಿಭಟನೆ ನಡೆಸಿದವು. ಕೃಷಿ ಕಾಯ್ದೆಗಳಿಗೆ ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ ಅವುಗಳನ್ನು ಕೇಂದ್ರ ಸರ್ಕಾರ ಹಿಂಪಡೆಯಿತು. ಕೃಷಿ ಕಾಯ್ದೆಗಳನ್ನು ಹಿಂಪಡೆಯುವುದಾಗಿ ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.