ಮಟನ್ ಸಾರು ಮಾಡಿಲ್ಲ ಎಂದು ಕುಡಿದ ಮತ್ತಿನಲ್ಲಿ 100 ನಂಬರ್ ಗೆ ಪದೇ ಪದೇ 6 ಬಾರಿ ಡಯಲ್ ಮಾಡಿ ಹೆಂಡ್ತಿ ವಿರುದ್ಧ ದೂರನಿತ್ತ ಪತಿರಾಯ |
ವೀಕೆಂಡ್ ಬಂತು ಅಂದ್ರೆ ಸಾಕು ಎಲ್ಲೂ ರಜೆ, ಫ್ಯಾಮಿಲಿ ಜತೆ ಜಾಲಿ ಟ್ರಿಪ್, ಹೊಟೇಲ್, ರೆಸ್ಟೋರೆಂಟ್‌ನಲ್ಲಿ ವೆರೈಟಿ ಫುಡ್ ಎಕ್ಸೆಟ್ರಾ. ನಾನ್ ವೆಜಿಟೇರಿಯನ್ಸ್ ಗಂತೂ ವೀಕೆಂಡ್‌ನಲ್ಲಿ ಚಿಕನ್, ಮಟನ್, ಕಬಾಬ್ ಬಿರಿಯಾನಿ ಇದ್ದರೇನೇ ಖುಷಿ. ವಾರ ಪೂರ್ತಿ ಏನೇ ತಿಂದರೂ ಕೆಲವರಿಗಂತೂ ವೀಕೆಂಡ್‌ನಲ್ಲಾದ್ರೂ ಸ್ಪೆಷಲ್ ಆಗಿ ನಾನ್‌ವೆಜ್ ರೆಸಿಪಿಗಳನ್ನು ತಯಾರಿಸಿ ತಿನ್ತಾರೆ.
ಆದ್ರೆ ತೆಲಂಗಾಣದಲ್ಲೊಬ್ಬ ಗಂಡ ಹೆಂಡ್ತಿ ವೀಕೆಂಡ್‌ನಲ್ಲಿ ಮಟನ್ ಕರಿ ಮಾಡಿಲ್ಲಾಂತ ಏನ್ ಮಾಡಿದ್ದಾನೆ ನೋಡಿ.
ಅದು ತೆಲಂಗಾಣದ ಒಂದು ಮಿಡಲ್ ಕ್ಲಾಸ್ ಫ್ಯಾಮಿಲಿ, ಅವತ್ತು ದುಡಿದು ಅವತ್ತು ತಿನ್ನೋ ಕುಟುಂಬ. ಹಾಗಂತ ವೀಕೆಂಡ್ ಗಮ್ಮತ್ತಿಗೆ ಮೋಸ ಮಾಡೋರು ಅಲ್ಲ. ವಾರಕ್ಕೊಮ್ಮೆ ನಾನ್ ವೆಜ್ ಮಾಡಿ ತಿನ್ನೋ ಕುಟುಂಬ. ನವೀನ್ ಮನೆಯಲ್ಲೂ ಹಾಗೇ ಪ್ರತಿವಾರದ ಕೊನೆಯಲ್ಲಿ ಹೆಂಡ್ತಿ ಮಟನ್ ಕರಿ ಮಾಡ್ತಿದ್ಲು. ಆದ್ರೆ ಆ ವಾರ ಮಾಂಸ ತರೋಕೆ ದುಡ್ಡಿಲ್ಲವಾಗಿತ್ತಾ ಹಣವಿಲ್ಲವಾಗಿತ್ತಾ ಒಟ್ನಲ್ಲಿ ಮಾಂಸ ತರಲ್ಲಿಲ್ಲ. ಮಟನ್ ಕರಿ ಮಾಡಲು ಸಾಧ್ಯವಾಗಲಿಲ್ಲ. ಮಟನ್ ಕರಿ ಮಾಡಿಲ್ಲ ಅಂತ ಗಂಡ ಹೆಂಡ್ತಿ ಮೇಲೆ ಗರಂ ಆಗಿದ್ದಾನೆ. ಸಿಟ್ಟಿಗೆದ್ದ ಗಂಡ ನವೀನ್ ಡೈರೆಕ್ಟ್ ಆಗಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಮಾತ್ರವಲ್ಲ ಮದ್ಯಪಾನ ಮಾಡಿದ್ದ ನವೀನ್ ಕೋಪಗೊಂಡು ಫೋನ್ ಎತ್ತಿಕೊಂಡು 100 ಗೆ ಡಯಲ್ ಮಾಡಿದನು. ತನ್ನ ಆಯ್ಕೆಯ ಮಟನ್ ಕರಿ ಮಾಡದ ಹೆಂಡತಿಯ ವಿರುದ್ಧ ದೂರು ನೀಡಿದ್ದಾನೆ. ಪೊಲೀಸ್ ನಿಯಂತ್ರಣ ಕೊಠಡಿ ನಿರ್ವಾಹಕರು ಆರಂಭದಲ್ಲಿ ಇದನ್ನು ತಮಾಷೆ ಎಂದು ಪರಿಗಣಿಸಿದ್ದರು. ಆದರೆ ಅದು ಅಲ್ಲಿಗೆ ಮುಗಿಯಲಿಲ್ಲ. ನವೀನ್ ಕಂಟ್ರೋಲ್ ರೂಂಗೆ ಪದೇ ಪದೇ ಆರು ಬಾರಿ ಕರೆ ಮಾಡಿ ಇದೇ ವಿಷಯವನ್ನು ಹೇಳಿದ್ದಾನೆ. ನಂತರ ನಿರ್ವಾಹಕರು ಮೇಲಾಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ನಂತರ ಘಟನೆಯನ್ನು ಪರಿಶೀಲಿಸಿದ ಪೊಲೀಸರು ನವೀನ್ ಗೆ ಬುದ್ಧಿವಾದ ಹೇಳಿದ್ದಾರೆ. ಜನರಿಗೆ ಸಹಾಯ ಮಾಡುವ ಉದ್ದೇಶದಿಂದ 100 ಇದ್ದು, ಇದನ್ನು ದುರುಪಯೋಗ ಪಡೆದುಕೊಳ್ಳಬಾರದು ಎಂದು ಹೇಳಿದ್ದಾರೆ.