ಮಾಸ್ಕ್ ಕಡ್ಡಾಯ ನಿಯಮ ಕೈಬಿಡಲು ಕೇಂದ್ರಕ್ಕೆ ಸಲಹೆ ನೀಡಿದ ತಜ್ಞರು !! | ಏಷ್ಯಾ ಹಾಗೂ ಯುರೋಪ್ ದೇಶಗಳಲ್ಲಿ ಕೋವಿಡ್ ಸಂಖ್ಯೆ ಹೆಚ್ಚುತ್ತಿರುವಾಗಲೇ ತಜ್ಞರಿಂದ ಅಚ್ಚರಿಯ ಸಲಹೆ
ಏಷ್ಯಾ ಮತ್ತು ಯೂರೋಪ್ ದೇಶಗಳಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ತಜ್ಞರು ಸರ್ಕಾರಕ್ಕೆ ಆಶ್ಚರ್ಯಕರ ಸಲಹೆ ನೀಡಿದ್ದು, ಮಾಸ್ಕ್ ಕಡ್ಡಾಯದ ನಿಯಮ ಕೈಬಿಡಬೇಕು ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಕೋವಿಡ್ ಏರಿಕೆ ಆಗುತ್ತಿರುವ ಬೆನ್ನಲ್ಲೇ ರಾಜ್ಯ ಸರ್ಕಾರಗಳು ಕಟ್ಟೆಚ್ಚರ ವಹಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಈ ಸೂಚನೆಯ ಬೆನ್ನಲ್ಲೇ ಸಾಂಕ್ರಾಮಿಕ ರೋಗಗಳ ತಜ್ಞರು ಅದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾಸ್ಕ್ ಕಡ್ಡಾಯದ ನಿಯಮ ಕೈಬಿಡಬೇಕು. ಗಂಭೀರ ಅನಾರೋಗ್ಯವುಳ್ಳವರು ಮತ್ತು ವೃದ್ಧರು ಮಾತ್ರ ಮಾಸ್ಕ್ ಧರಿಸಲು ಸಲಹೆ ನೀಡಬೇಕು. ಲಸಿಕೆ ಪ್ರಮಾಣವನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದ್ದಾರೆ.
ದೆಹಲಿಯ ಏಮ್ಸ್‌ನ ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಸಹಯೋಗದ ಕೋವ್ಯಾಕ್ಸಿನ್ ಲಸಿಕೆ ಪ್ರಯೋಗದ ಉಸ್ತುವಾರಿಯಾಗಿರುವ ಡಾ.ಸಂಜಯ್ ರಾಯ್, ಸಫ್ದರ್‌ಜಂಗ್ ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದ ಮುಖ್ಯಸ್ಥ ಡಾ.ಜುಗಲ್ ಕಿಶೋರ್, ಹಿರಿಯ ಸಾಂಕ್ರಾಮಿಕ ರೋಗಗಳ ತಜ್ಞ ಹಾಗೂ ಸಾರ್ವಜನಿಕ ಆರೋಗ್ಯ ತಜ್ಞ ಡಾ.ಚಂದ್ರಕಾಂತ್ ಲಹಾರಿಯಾ ಸೇರಿದಂತೆ ಕೆಲ ತಜ್ಞರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಬೇರೆ ದೇಶಗಳಲ್ಲಿ ಕೋವಿಡ್ ಹೆಚ್ಚಳವಾಗುತ್ತಿದೆ ಎಂದು ನಾವು ಭಯ ಪಡುವ ಅಗತ್ಯವಿಲ್ಲ. ಮುಂದೆ ಕೊರೊನಾ ಅಲೆಗಳು ಭಾರತಕ್ಕೆ ಬರುವ ಸಾಧ್ಯತೆ ಬಹಳ ಕಡಿಮೆ. ಭಾರತದಲ್ಲಿ ಶೇ.80ರಿಂದ ಶೇ.90ರಷ್ಟು ಜನರಿಗೆ ಕೋವಿಡ್ ಈಗಾಗಲೇ ಬಂದು ಹೋಗಿದೆ. ಹೀಗಾಗಿ ಅವರಲ್ಲಿ ನೈಸರ್ಗಿಕವಾಗಿ ಕೋವಿಡ್ ನಿರೋಧಕ ಶಕ್ತಿ ವೃದ್ಧಿಯಾಗಿದೆ. ನಮ್ಮ ದೇಶದಲ್ಲಿ ನಾವೇ ಅಭಿವೃದ್ಧಿ ಅಭಿವೃದ್ಧಿಪಡಿಸಿದ ಲಸಿಕೆಯನ್ನು ನೀಡಿದ್ದೇವೆ ಮತ್ತು ಬಹುತೇಕ ಎಲ್ಲರಿಗೂ ಲಸಿಕೆ ನೀಡಲಾಗಿದೆ. ಬೇರೆ ದೇಶಗಳನ್ನು ನೋಡಿಕೊಂಡು ನಮ್ಮಲ್ಲೂ ಹಾಗೇ ಆಗಬಹುದು ಎಂದು ಊಹೆ ಮಾಡುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ.