ಉಪ್ಪಿನಂಗಡಿ: ಹಿಜಾಬ್ ಬಿಟ್ಟು ಕಾಲೇಜು ಸಮವಸ್ತ್ರ ಪಾಲನೆಗೆ ಒಪ್ಪಿದ ವಿದ್ಯಾರ್ಥಿನಿಯರು!! | ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದ ಆಡಳಿತ ಮಂಡಳಿ

ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಉಪ್ಪಿನಂಗಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿ ಬಹಿಷ್ಕರಿಸಿದ್ದ ವಿದ್ಯಾರ್ಥಿನಿಯರು ಕೊನೆಗೂ ಸಮವಸ್ತ್ರ ನಿಯಮಾವಳಿಗಳನ್ನು ಪಾಲನೆ ಮಾಡಲು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಹಿಜಾಬ್ ಧರಿಸಲು ನಿರಾಕರಣೆ ವ್ಯಕ್ತವಾದ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳು ಶನಿವಾರವೂ ತರಗತಿ ಬಹಿಷ್ಕರಿಸಿದರಾದರೂ ಸೋಮವಾರದಿಂದ ಕಾಲೇಜಿನ ಸಮವಸ್ತ್ರ ನಿಯಮಾವಳಿ ಪಾಲನೆ ಮಾಡಿ ಕಾಲೇಜಿಗೆ ಹಾಜರಾಗುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ.

ನ್ಯಾಯಾಲಯದ ನಿಯಮಾವಳಿಯ ಅನುಸಾರ ಹಿಜಾಬ್ ಧರಿಸದೆ ಕಾಲೇಜಿಗೆ ಬರಬೇಕೆಂಬ ಕಾಲೇಜಿನ ಆಡಳಿತದ ನಿಲುವನ್ನು ಒಪ್ಪದ ವಿದ್ಯಾರ್ಥಿನಿಯರು ತಮ್ಮ ಬೆಂಬಲಿತ ವಿದ್ಯಾರ್ಥಿಗಳೊಡಗೂಡಿ ಪರೀಕ್ಷೆ ಬಹಿಷ್ಕರಿಸಿದ್ದರು. ಇತ್ತ ಪ್ರತಿಭಟನಾ ನಿರತ ವಿದ್ಯಾರ್ಥಿಗಳ ಪರ ಮಾತುಕತೆ ನಡೆಸಿದ ಮುಖಂಡರಿಗೆ ಕಾಲೇಜಿನ ಆಡಳಿತ ಮಂಡಳಿ ಯಾವುದೇ ಕಾರಣಕ್ಕೂ ನ್ಯಾಯಾಲಯದ ತೀರ್ಪನ್ನು ಉಲ್ಲಂಘಿಸಲಾಗದು ಎಂದು ಸ್ಪಷ್ಟಪಡಿಸಿತು.

ಈ ಹಿನ್ನೆಲೆಯಲ್ಲಿ ಪ್ರತಿಭಟನಾ ನಿರತರೊಂದಿಗೆ ಕೆಲ ಮುಖಂಡರು ಮಾತುಕತೆ ನಡೆಸಿ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕುಂಟಾಗಬಾರದೆಂದು, ಸೋಮವಾರದ ಬಳಿಕ ಕಾಲೇಜಿನ ಸಮವಸ್ತ್ರದ ಪಾಲನೆಯೊಂದಿಗೆ ಕಾಲೇಜಿಗೆ ಹಾಜರಾಗುವ ನಿರ್ಧಾರ ತಳೆದಿರುವ ಮಾಹಿತಿ ಬಂದಿದೆ ಎಂದು ಕಾಲೇಜಿನ ಆಡಳಿತ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಅತ್ರಮಜಲು ತಿಳಿಸಿದ್ದಾರೆ.

Leave A Reply