ಹಿಜಾಬ್ ವಿರುದ್ಧ ತೀರ್ಪು ನೀಡಿದ್ದ ಕರ್ನಾಟಕ ಹೈಕೋರ್ಟ್ ಜಡ್ಜ್‌ಗೆ ಕೊಲೆ ಬೆದರಿಕೆ ಹಾಕಿದ್ದ ಆರೋಪಿ ಮಧುರೈ ನಲ್ಲಿ ಅರೆಸ್ಟ್
ಬೆಂಗಳೂರು: ಹಿಜಬ್ ತೀರ್ಪು ಪ್ರಕಟಿಸಿದ ಕರ್ನಾಟಕ ಹೈಕೋಟ್ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರಿಗೆ ಕೊಲೆಬೆದರಿಕೆ ಹಾಕಿದ್ದ ಆರೋಪಿಯನ್ನು ಮಧುರೈ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಚೆನ್ನೈನ ರೆಹಮತ್ತುಲ್ಲಾ ಬಂಧಿತ ಆರೋಪಿ. ಈತ ತೌಹಿಫ್ ಜಮಾತ್ ಸಂಘಟನೆಯ ಸದಸ್ಯನಾಗಿದ್ದು, ಮಧುರೈ ಪೊಲೀಸರು ಶನಿವಾರ ರಾತ್ರಿ ಆರೋಪಿಯನ್ನು ತಿರುನಲ್ವೇಲಿಯಲ್ಲಿ ಬಂಧಿಸಿದ್ದಾರೆ. ಈಗ ಆರೋಪಿಗೆ ಮಾರ್ಚ್ 31ರ ವರೆಗೂ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು ಆತನನ್ನ ತಿರುಪತ್ತೂರ್ ಈಗ ಜೈಲಿನಲ್ಲಿರಿಸಲಾಗಿದೆ.
ಹಿಜಬ್ ತೀರ್ಪು ಪ್ರಕಟಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ತಮಿಳುನಾಡು ಮೂಲದ ಮತೀಯ ಸಂಘಟನೆಯೊಂದು ಕೊಲೆ ಬೆದರಿಕೆ ಹಾಕಿತ್ತು. ಅದು ತೌಹೀದ್ ಜಮಾತ್ ಸಂಘಟನೆ ಆಗಿದ್ದು, ಅದು ಹಾಕಿದ ಬೆದರಿಕೆ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಬೆಂಗಳೂರಿನ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಸಂಘಟನೆ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇದೇ ವೇಳೆ ಮಧುರೈ ಪೊಲೀಸರೂ ಸ್ವಯಂ ಪ್ರಕರಣ ದಾಖಲಿಸಿಕೊಂಡಿದ್ದರು. ಜಡ್ಜ್ ಗೆ ಬೆದರಿಕೆ ಹಾಕಿದ ಸಂಬಂಧ ತನಿಖೆ ನಡೆಸುವಂತೆ ಒತ್ತಾಯಿಸಿ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ ಹೈಕೋರ್ಟ್ ರಿಜಿಸ್ಟ್ರಾರ್ ಅವರಿಗೆ ಮನವಿ ಮಾಡಿದ್ದರು. ಅಲ್ಲದೆ ಸದರಿ ಸಂಘಟನೆಯ ಮುಖಂಡ ಆರ್.ರೆಹ್ಮತ್‍ವುಲ್ಲಾ ಮಧುರೈನಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಹಿಜಬ್ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿ ಪರೋಕ್ಷವಾಗಿ ಜಡ್ಜ್ ಗೆ ಕೊಲೆ ಬೆದರಿಕೆ ಹಾಕಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಆಧಾರಿಸಿ ವಕೀರೊಬ್ಬರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಪ್ರಕರಣ ಸಂಬಂಧ ಐಪಿಸಿ ಸೆಕ್ಷನ್ 506(ಬೆದರಿಕೆ), 501(1)(ಮಾನಹಾನಿ), 503(ಕ್ರಿಮಿನಲ್ ಬೆದರಿಕೆ), 109(ಪ್ರಚೋದನೆ), 504(ಶಾಂತಿ ಭಂಗ), 505(ಸಾರ್ವಜನಿಕ ಕಿಡಿಗೇಡಿತನ) ಸೇರಿದಂತೆ ವಿವಿಧ ಸೆಕ್ಷನ್‍ಗಳಲ್ಲಿ ಎಫ್‍ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗಿತ್ತು.
ಅಂದು ಸಂಘಟನೆ ಮುಖ್ಯಸ್ಥ ತಮ್ಮ ಭಾಷಣದಲ್ಲಿ ಸಾರ್ವಜನಿಕ ಭಾಷಣದಲ್ಲಿ ಹಿಜಬ್ ಕುರಿತು ತೀರ್ಪು ನೀಡಿರುವ ನ್ಯಾಯಾಮೂರ್ತಿಗಳು ಕೊಲೆಯಾದಲ್ಲಿ ಅವರೇ ನೇರ ಹೊಣೆಯಾಗಲಿದ್ದಾರೆ ಎಂದು ಹೇಳಿದ್ದರು. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ನಾಯಕರು ತೀರ್ಪು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ತಿಳಿಸಿದ್ದರು. ಅಲ್ಲದೆ, ಹೊಸಪೇಟೆಯಲ್ಲಿ ಹಿಜಬ್ ಧರಿಸುವುದನ್ನು ಸಮರ್ಥಿಸಿ ಗೋಡೆಗಳ ಮೇಲೆ ಬರಹಗಳನ್ನು ಬರೆಯಲಾಗಿದ್ದು, ಅಮೀರ್- ಇ-ಶರಿತ್ ಎಂಬ ಸಂಘಟನೆ ತೀರ್ಪು ಖಂಡಿಸಿ ಬಂದ್‍ಗೆ ಕರೆ ನೀಡಿತ್ತು. ಈ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಸ್ವಯಂಪ್ರೆರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಪತ್ರದಲ್ಲಿ ಒತ್ತಾಯಿಸಿದ್ದರು. ಅದರಂತೆ ಕಾರ್ಯನಿರ್ವಹಿಸಿದ ಪೊಲೀಸರು ಇದೀಗ ಆರೋಪಿಯನ್ನು ಹೊಂದಿಸಿ ನ್ಯಾಯಾಂಗ ಪ್ರಕ್ರಿಯೆಗೆ ಎಳೆದು ತಂದಿದ್ದಾರೆ.