ಕರಾವಳಿ ಜಿಲ್ಲೆಗಳಲ್ಲೂ ಮಿತಿ ಮೀರುತ್ತಿದೆ ಖಾಸಗಿ ಬಸ್ಸುಗಳ ವೇಗದ ಚಾಲನೆ!! ಟೈಮ್ ಕೀಪರ್ ಭಯದಿಂದ ‘ತೊರಿಪ್ಪು ತೊರಿಪ್ಪು’ ಎನ್ನುವ ಮಾತಿನ ಹಿಂದಿದೆ ಭಯದ ಪಯಣ!!

0 9

ಇಂದು ಮುಂಜಾನೆ ತುಮಕೂರು ಜಿಲ್ಲೆಯಲ್ಲಿ ನಡೆದ ಖಾಸಗಿ ಬಸ್ ಒಂದರ ಅಪಘಾತದಲ್ಲಿ ಹಲವರು ಗಂಭೀರ ಗಾಯಗೊಂಡು,ಮೃತಪಟ್ಟ ದೇಹಗಳು ಛಿದ್ರಛಿದ್ರವಾಗಿ ರಸ್ತೆಯ ಇಕ್ಕೆಲಗಳಲ್ಲಿ ಬಿದ್ದ ಘಟನೆಯ ಬಳಿಕ ರಾಜ್ಯ ಸರ್ಕಾರ ಎಚ್ಚರ ವಹಿಸಿದ್ದು, ಅತೀ ವೇಗದ ಖಾಸಗಿ ಬಸ್ಸುಗಳ ಮೇಲೆ ನಿಗಾ ಇಡಲು ಮುಂದಾಗಿದೆ.

ಅವಿಭಜಿತ ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳಲ್ಲೂ ಇಂತಹ ಅತಿವೇಗದ ಖಾಸಗಿ ಬಸ್ಸುಗಳು ಸಂಚರಿಸುತ್ತಿದ್ದೂ, ಈ ವರೆಗೆ ಅವಘಡ ಸಂಭವಿಸದೆ ಇದ್ದರೂ, ಅದೇ ಭಯದಲ್ಲಿ ನಿತ್ಯವೂ ಇಂತಹ ಖಾಸಗಿ ಬಸ್ಸುಗಳನ್ನು ಅವಲಂಬಿಸುವ ಪ್ರಯಾಣಿಕರ ಎದೆಯಲ್ಲಿ ಇಂದಿನ ಘಟನೆಯು ನಡುಕ ಹುಟ್ಟಿಸಿದಂತಿದೆ. ಒಂದೆಡೆ ಮರಳು ಸಾಗಾಟದ ಲಾರಿಗಳು, ಇನ್ನೊಂದೆಡೆ ಖಾಸಗಿ ಬಸ್ಸುಗಳ ಮಿಂಚಿನ ಓಡಾಟ. ಇವೆಲ್ಲವನ್ನೂ ಕಾಣುತ್ತಿರುವ ಜಿಲ್ಲೆಯ ಜನತೆ ಧೈರ್ಯ ಖಾಸಗಿ ಬಸ್ಸು ಏರಲು ಭಯಪಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಮಂಗಳೂರಿನ ಸ್ಟೇಟ್ ಬ್ಯಾಂಕ್ ನಿಂದ ಹೊರಡುವ ಕೆಲ ಖಾಸಗಿ ಬಸ್ಸುಗಳು ಇಂತಿಷ್ಟು ನಿಮಿಷಗಳಲ್ಲಿ ಆಯಾ ನಿಲ್ದಾಣ ತಲುಪಬೇಕು ಎನ್ನುವ ಕಟ್ಟುಪಾಡುಗಳಿವೆ. ಯಾಕೆಂದರೆ ಇಂದಿನ ಯುಗದಲ್ಲಿ ಲೆಕ್ಕಕ್ಕೆ ಸಿಗದಷ್ಟು ಸಂಖ್ಯೆಯಲ್ಲಿ ಬಸ್ಸುಗಳಿದ್ದು ಎಲ್ಲವಕ್ಕೂ ಟ್ರಿಪ್ ನಡೆಸುವ ಅವಕಾಶ ಸಿಗಲಿ ಎನ್ನುವ ಕಾರಣಕ್ಕೆ.ಪ್ರತೀ ಸ್ಟೇಜ್ ನಲ್ಲೂ ಓರ್ವ ಅಥವಾ ಇಬ್ಬರು ಟೈಮ್ ಕೀಪರ್ ಗಳಿದ್ದು ಅವರಿಗೆ ಮಾಮೂಲು ಕೊಟ್ಟ ಬಳಿಕ ಅಲ್ಲಿಂದ ಹೊರಟು ಕೆಲ ನಿಮಿಷಗಳಲ್ಲಿ ಇನ್ನೊಂದು ನಿಲ್ದಾಣ. ಹೀಗೆ ಸಾಗಿ ಬರುವ ಬಸ್ಸುಗಳು ಕಣ್ಣ ಮುಂದೆ ಕಂಡರೂ ಸೆಕೆಂಡ್ ಗಳ ಅಂತರದಲ್ಲಿ ಕಣ್ಮರೆಯಾಗಿಬಿಡುತ್ತದೆ. ಒಂದೆಡೆ ನಿರ್ವಾಹಕನ ವಿಷಲ್ ಶಬ್ದ, ಇನ್ನೊಂದೆಡೆ ವಾಹನ ದಟ್ಟನೆ. ಇವೆಲ್ಲವನ್ನೂ ತನ್ನ ಕಣ್ಣುಗಳಿಂದ ಸೂಕ್ಷ್ಮವಾಗಿ ಗಮನಿಸುತ್ತಾ ಅದ್ಹೇಗೋ ನಿಮಿಷಕ್ಕೆ ಸರಿಯಾಗಿ ನಿಲ್ದಾಣ ತಲುಪಿಸುವ ಜವಾಬ್ದಾರಿ ಚಾಲಕನ ಹೆಗಲಮೇಲಿರುತ್ತದೆ.

ಮಂಗಳೂರಿನಿಂದ ಮೂಡಬಿದ್ರೆ ಮಾರ್ಗವಾಗಿ ಕಾರ್ಕಳ, ಮಂಗಳೂರಿನಿಂದ ಉಡುಪಿ, ಮಂಗಳೂರಿನಿಂದ ತೊಕ್ಕೊಟ್ಟು, ದೇರಳಕಟ್ಟೆ, ಹೀಗೆ ನಗರದ ಆಯಾ ಕಡೆಗಳಿಗೆ ತೆರಳುವ ಬಸ್ಸುಗಳು ನಿಮಿಷಕ್ಕೆ ಒಂದರಂತೆ ಲೆಕ್ಕಕ್ಕೆ ಸಿಗದಷ್ಟು ಸಂಚರಿಸುತ್ತಿದ್ದು, ಇವುಗಳ ವೇಗವು ಮಿತಿಮೀರಿ ಇರುತ್ತದೆ ಎನ್ನುವುದಕ್ಕೆ ಅವುಗಳಲ್ಲಿರುವ express ಬೋರ್ಡ್ ನಿರ್ವಾಹಕನ ವಿಷಲ್, ಹಾಗೂ ಕರ್ಕಶವಾದ ಹಾರ್ನ್ ಗಳೇ ಪ್ರತ್ಯಕ್ಷ ಸಾಕ್ಷಿ.

ಒಂದು ಸ್ಟಾಂಡ್ ನಿಂದ ಇನ್ನೊಂದು ಸ್ಟಾಂಡ್ ಗೆ ಒಂದೆರಡು ನಿಮಿಷಗಳನ್ನು ಫಿಕ್ಸ್ ಮಾಡಿ ಆ ಸಮಯದಲ್ಲಿ ತಲುಪಿಸುವ ಜವಾಬ್ದಾರಿ ಹೊತ್ತ ಚಾಲಕ ಒಂದೊಮ್ಮೆ ಕೈಚೆಲ್ಲಿದರೆ!?. ಕೆಲ ದಿನಗಳ ಹಿಂದೆ ಖಾಸಗಿ ಬಸ್ಸಿನ ಚಾಲಕರೊಬ್ಬರು ಚಾಲನೆಯ ವೇಳೆ ಹೃದಯಾಘಾತಕ್ಕೀಡಾದ ಘಟನೆಯೊಂದರಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸದಿದ್ದರೂ, ಮಿತಿ ಮೀರಿದ ವೇಗಕ್ಕೆ ಕಡಿವಾಣ ಬೀಳಲೇ ಬೇಕಿದೆ.ಇಂದು ನಡೆದ ಒಂದು ಅಪಘಾತದ ದೃಶ್ಯಾವಳಿಗಳನ್ನು ಕಂಡ ಸರ್ಕಾರ ಖಾಸಗಿ ಬಸ್ಸುಗಳ ಮೇಲೆ ಹದ್ದಿನ ಕಣ್ಣಿಡದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಇಂತಹ ಘಟನೆ ನಡೆಯಲು ಸಮಯ ದೂರವಿಲ್ಲ ಎನ್ನುತ್ತಾರೆ ಅತಿವೇಗದ ಖಾಸಗಿ ಬಸ್ಸುಗಳ ನಿತ್ಯ ಪ್ರಯಾಣಿಕರು.

Leave A Reply