ನೆಟ್ಫ್ಲಿಕ್ಸ್ ಬಳಕೆದಾರರೇ ಗಮನಿಸಿ !! | ಇನ್ನು ಮುಂದೆ ಸ್ನೇಹಿತರೊಂದಿಗೆ ಪಾಸ್ವರ್ಡ್ ಹಂಚಿಕೊಳ್ಳಲು ತೆರಬೇಕಾದೀತು ಹೆಚ್ಚುವರಿ ಶುಲ್ಕ
ಈಗಿನ ಕಾಲದಲ್ಲಿ ಬಹುತೇಕ ಜನರು ನೆಟ್ಫ್ಲಿಕ್ಸ್ ಬಳಕೆದಾರರೇ. ಯಾವುದೇ ಸಿನಿಮಾವಿರಲಿ, ಸೀರೀಸ್ ಇರಲಿ ಮೊದಲು ನೆನಪಾಗುವುದೇ ನೆಟ್ಫ್ಲಿಕ್ಸ್. ಇಂತಹ ಪ್ರಸಿದ್ಧ ವೀಡಿಯೋ ಹಂಚಿಕೆ ಪ್ಲಾಟ್ಫಾರ್ಮ್ ನೆಟ್ಫ್ಲಿಕ್ಸ್ ಇದೀಗ ತನ್ನ ಚಂದಾದಾರರು ಸ್ನೇಹಿತರೊಡನೆ ಪಾಸ್ವರ್ಡ್ ಹಂಚಿಕೊಳ್ಳಬಹುದಾದ ಅವಕಾಶಕ್ಕೆ ಹೆಚ್ಚುವರಿ ಶುಲ್ಕ ವಿಧಿಸಲು ಯೋಚಿಸುತ್ತಿದೆ.
ಈ ಹಿಂದೆ ನೆಟ್ಫ್ಲಿಕ್ಸ್ ಚಂದಾದಾರು ತಮ್ಮ ಪಾಸ್ವರ್ಡ್ ಅನ್ನು ಗೆಳೆಯರೊಡನೆ ಹಂಚಿಕೊಳ್ಳುವ ಮೂಲಕ ತಮಗೆ ಸಿಗುತ್ತಿದ್ದ ಮಲ್ಟಿಪಲ್ ಡಿವೈಸ್ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ ಈ ಅವಕಾಶಕ್ಕೆ ನೆಟ್ಫ್ಲಿಕ್ಸ್ ಕಡಿವಾಣ ಹಾಕಲಿದೆ. ಗೆಳೆಯರೊಡನೆ ಪಾಸ್ವರ್ಡ್ ಹಂಚಿಕೊಳ್ಳಲು ನೆಟ್ಫ್ಲಿಕ್ಸ್ ಹೆಚ್ಚುವರಿ ಶುಲ್ಕ ವಿಧಿಸಲಿದೆ ಎಂದು ತಿಳಿಸಿದೆ.
ನೆಟ್ಫ್ಲಿಕ್ಸ್ ತನ್ನ ಮುಖ್ಯ ಚಂದಾದಾರರಿಗೆ ಇ-ಮೇಲ್ನಲ್ಲಿ ಕೋಡ್ಅನ್ನು ಕಳುಹಿಸಲಿದೆ. ಈ ಕೋಡ್ಗಳ ಮುಖಾಂತರ ಕೇವಲ ಚಂದಾದಾರರ ಮನೆಯಲ್ಲಿರುವ ಡಿವೈಸ್ಗಳಲ್ಲಿ ನೆಟ್ಫ್ಲಿಕ್ಸ್ ಲಾಗ್ಇನ್ ಆಗಬಹುದು. ಮಿತಿಗಿಂತ ಹೆಚ್ಚುವರಿ ಸ್ನೇಹಿತರೊಂದಿಗೆ ಪಾಸ್ವರ್ಡ್ ಹಂಚಿಕೊಂಡಲ್ಲಿ ಮುಖ್ಯ ಚಂದಾದಾರನೇ ಅದರ ಹೆಚ್ಚುವರಿ ಹಣವನ್ನು ಭರಿಸಬೇಕು.
ಈಗಾಗಲೇ ಬ್ರಿಟನ್ ಹಾಗೂ ಐರ್ಲೆಂಡಿನಲ್ಲಿ ಈ ಕ್ರಮ ಜಾರಿಯಾಗಿದೆ. ಚಂದಾದಾರರು ತಮ್ಮ ಗೆಳೆಯರೊಂದಿಗೆ ಪಾಸ್ವರ್ಡ್ ಹಂಚಿಕೊಳ್ಳಲು ಹೆಚ್ಚುವರಿ 2-3 ಡಾಲರ್ ಭರಿಸಬೇಕು ಎಂದು ಕಂಪನಿ ತಿಳಿಸಿದೆ. ಶೀಘ್ರವೇ ನೆಟ್ಫ್ಲಿಕ್ಸ್ನ ಹೊಸ ಕ್ರಮ ಜಾಗತಿಕವಾಗಿ ಜಾರಿಯಾಗುವ ಸಾಧ್ಯತೆ ಇದೆ. ನೆಟ್ಫ್ಲಿಕ್ಸ್ ತನ್ನ ಹೊಸ ಚಂದಾದಾರಿಗೆ ಈಗಾಗಲೇ ಈ ನಿಯಮವನ್ನು ಜಾರಿಗೊಳಿಸಿದೆ. ಪ್ರಸ್ತುತ ನೆಟ್ಫ್ಲಿಕ್ಸ್ ಬಳಕೆದಾರರಿಗೆ ಈ ನಿಯಮ ಅನ್ವಯವಾಗುವುದಕ್ಕೂ 30 ದಿನಗಳ ಮೊದಲು ತಿಳಿಸಲಿದೆ.