ತಲವಾರು ಹಿಡಿದು ಬೆದರಿಕೆ, ಕೊಲೆಯತ್ನ ಮಾಡಿ, ಕಾಡಿನ ಮಧ್ಯೆ ನೀರಿನಲ್ಲಿ ಅವಿತಿದ್ದ ಆರೋಪಿಯನ್ನು ಡ್ರೋಣ್ ಕ್ಯಾಮೆರಾ ಬಳಸಿ ಪತ್ತೆಹಚ್ಚಿದ ಪೊಲೀಸರು |
ಕೈಗೆ ಸಿಗದೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಾ ತಪ್ಪಿಸಿಕೊಳ್ಳುತ್ತಿದ್ದ ಕೊಲೆ ಆರೋಪಿಯೋರ್ವನನ್ನು ಪೊಲೀಸರು ಡ್ರೋಣ್ ಕ್ಯಾಮೆರಾ ಬಳಸಿ ಹಿಡಿದ ಘಟನೆಯೊಂದು ಚೆನ್ನೈ ನಲ್ಲಿ ನಡೆದಿದೆ.
ಸುಮಾರು 70 ಎಕರೆ ಜಾಗದಲ್ಲಿ ಹರಡಿಕೊಂಡಿದ್ದ ನೀರು ತುಂಬಿದ್ದ ಕೆರೆ ಮತ್ತು ಪೊದೆಗಳ ನಡುವೆ ಅವಿತುಕೊಂಡಿದ್ದ ಆರೋಪಿಯನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ. ನಂತರ ಡ್ರೋಣ್ ಕ್ಯಾಮೆರಾ ಬಳಸಿ ಆರೋಪಿ ಶಾಹುಲ್ ಹಮೀದ್ ನನ್ನು ಹಿಡಿದಿದ್ದಾರೆ.
ತಮಿಳುನಾಡಿನ ತೆಂಕಾಸಿ ಜಿಲ್ಲೆಯ ಚಿನ್ನಪೊತ್ತೈ ಎಂಬಲ್ಲಿನ ನೀರು ಹರಡಿಕೊಂಡಿರುವ ಬೃಹತ್ತಾದ ಜಾಗ ಇದೆ. ನೀರು ಹರಿದು ಹೋಗದೆ ಅಲ್ಲಿನ ಕಾಡಿನ ಉದ್ದಕ್ಕೂ ಬಂಡೆ ಕಲ್ಲುಗಳು ಹರಡಿಕೊಂಡಿದೆ. ಅದರ ಎಡೆಯಲ್ಲಿ ಬಂಡೆ ಮತ್ತು ಪೊದೆಗಳು, ಮರಗಳು ಮೈಚಾಚಿಕೊಂಡು ಹರಡಿದ್ದು ಅದರ ಎಡೆಯಲ್ಲಿ ಆರೋಪಿ ಶಾಹುಲ್ ಹಮೀದ್ ಬಚ್ಚಿಟ್ಟುಕೊಂಡಿದ್ದ.
ಕಳೆದ ಹಲವಾರು ಸಮಯಗಳಿಂದ ಕೈಯಲ್ಲಿ ಕತ್ತಿ ಹಿಡಿದುಕೊಂಡು ಸ್ಥಳೀಯರಿಗೆ ಬೆದರಿಕೆ ಹಾಕುವುದು, ಅಲ್ಲಿರುವ 70 ಎಕರೆ ವ್ಯಾಪ್ತಿಯ ಕೆರೆ ಇರುವ ಜಾಗ ತನ್ನದೇ ಏರಿಯಾ, ಈ ಜಾಗಕ್ಕೆ ಯಾರು ಕೂಡ ಬರಬಾರದು ಎಂದು ಹೇಳಿ ಬೆದರಿಸುತ್ತಿದ್ದ.
ಪೀರ್ ಮಹಮ್ಮದ್ ಎಂಬುವವರು ಆ ಜಾಗದ ವ್ಯಾಪ್ತಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿ ತಲವಾರಿನಿಂದ ಕಡಿದು ಹಾಕಿದ್ದಾನೆ. ಗಂಭೀರ ಗಾಯಗೊಂಡಿದ್ದ ಅವರನ್ನು ಬಳಿಕ ತಿರುನಲ್ವೇಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಸ್ಥಳೀಯ ಮಹಿಳೆಯರು ಬಟ್ಟೆ ಒಗೆಯಲು, ಸ್ನಾನಕ್ಕಾಗಿ ಕೆರೆಯ ಬಳಿಗೆ ಬಂದರೆ ಅಲ್ಲಿಗೆ ಬರುತ್ತಿದ್ದ ಆರೋಪಿ ಶಾಹುಲ್ ಹಮೀದ್ ಕತ್ತಿ ತೋರಿಸಿ ಬೆದರಿಕೆ ಹಾಕುತ್ತಿದ್ದ. ಹೀಗಾಗಿ ಆ ವ್ಯಾಪ್ತಿಯ ಜನ ಭಯಭೀತಿಯಿಂದಲೇ ಬದುಕುತ್ತಿದ್ದರು.
ಈತನ ವಿರುದ್ಧ ಹಲವು ಕೇಸು ದಾಖಲಾಗಿದ್ದರೂ ಹಿಡಿಯಲು ಆಗುತ್ತಿರಲಿಲ್ಲ.
ಪೊಲೀಸರಿಗೆ ಆತನನ್ನು ಹಿಡಿಯಲೇ ಬೇಕಾಗಿತ್ತು. ಹೀಗಾಗಿ ಎರಡು ಅತ್ಯಾಧುನಿಕ ಡ್ರೋಣ್ ಕ್ಯಾಮರಾ ಇಟ್ಟು ಆರೋಪಿ ಶಾಹುಲ್ ಹಮೀದ್ ಹುಡುಕಾಟ ನಡೆಸಿದ್ದರು.
ಬಾನಂಗಳದಲ್ಲಿ ದ್ರೋಣ್ ಕ್ಯಾಮರಾ ಹಾರುತ್ತಿದ್ದಂತೆ ಶಾಹುಲ್ ನೀರಿನಲ್ಲಿ ಮುಳುಗುತ್ತಾ ತನ್ನ ಇರವು ಕಾಣದಂತೆ ತಪ್ಪಿಸಲು ಯತ್ನಿಸಿದ್ದಾನೆ. ಆದರೆ, ಆತನ ಇರುವಿಕೆಯ ಜಾಗ ತಿಳಿಯುತ್ತಲೇ ಪೊಲೀಸರು ಸುತ್ತುವರಿದಿದ್ದು, ತನ್ನ ಕೈಯಲ್ಲಿದ್ದ ತಲವಾರು ಕೆಳಗಿಟ್ಟು ಆರೋಪಿ ಶರಣಾಗಿದ್ದಾನೆ.
ಪೊಲೀಸ್ ಇನ್ಸ್ ಪೆಕ್ಟರ್ ಬಾಲಮುರುಗನ್ ನೇತೃತ್ವದ ತಂಡ ಮಾ.15ರಂದು ನಡೆಸಿದ ಕಾರ್ಯಾಚರಣೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಡೋಣ್ ಕ್ಯಾಮರಾದಲ್ಲಿ ಆರೋಪಿಯ ಪತ್ತೆ ಮಾಡಿದ್ದಲ್ಲದೆ, ಆತನನ್ನು ಹಿಡಿದು ತಂದ ವಿಡಿಯೋವನ್ನು ತೆಂಕಾಸಿ ಎಸ್ಪಿ ಕೃಷ್ಣರಾಜ್ ಟ್ವಿಟರ್ ನಲ್ಲಿ ಷೇರ್ ಮಾಡಿದ್ದಾರೆ. ಪೊಲೀಸರ ಕಾರ್ಯಕ್ಕೆ ಎಲ್ಲೆಂದರಲ್ಲಿ ಪ್ರಶಂಸೆಗಳ ಮಹಾಪೂರ ಹರಿದು ಬರುತ್ತಿದೆ. ಇಷ್ಟು ಮಾತ್ರವಲ್ಲ ಆರೋಪಿಯನ್ನು ಪತ್ತೆಹಚ್ಚಿದ್ದರಿಂದ ಆ ವ್ಯಾಪ್ತಿಯ ಜನ ನಿರ್ಭೀತಿಯಿಂದ ಬದುಕುವಂತಾಗಿದೆ ಎಂದೇ ಹೇಳಬಹುದು.