ಸವಣೂರಿನ ಶಿಲ್ಪಿ, ಹಿರಿಯ ಸಹಕಾರಿ ಧುರೀಣ ಸವಣೂರು ಸೀತಾರಾಮ ರೈ ಅವರಿಗೆ ಪ್ರತಿಷ್ಟಿತ ಸಹಕಾರಿ ರತ್ನ ಪ್ರಶಸ್ತಿ
ಸವಣೂರು : ರಾಜ್ಯ ಸರಕಾರ ನೀಡುವ ಸಹಕಾರಿ ರತ್ನ ಪ್ರಶಸ್ತಿಗೆ ಆದರ್ಶ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ,ಹಿರಿಯ ಸಹಕಾರಿ ಧುರೀಣ ,ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ಸವಣೂರು ಸೀತಾರಾಮ ರೈ ಅವರು ಆಯ್ಕೆಯಾಗಿದ್ದಾರೆ.
ಸವಣೂರು ಕೆ.ಸೀತಾರಾಮ ರೈ ಅವರು ಸಹಕಾರಿ ಕ್ಷೇತ್ರಕ್ಕೆ ಸಲ್ಲಿಸಿದ ಅನುಪಮ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭವು ಮಾ.20ರಂದು ಬೆಂಗಳೂರಿನಲ್ಲಿ ನಡೆಯಲಿದ್ದು ಮುಖ್ಯಮಂತ್ರಿ ಬಸವರಾಜ ಮೊಮ್ಮಾಯಿ ಅವರು ಪ್ರಶಸ್ತಿ ಪ್ರದಾನ ಮಾಡುವರು.
ಸೀತಾರಾಮ ರೈ ಅವರು,1988ರಿಂದ 2009ರವರೆಗೆ ಸವಣೂರು ಸಿ.ಎ.ಬ್ಯಾಂಕಿನ ಅಧ್ಯಕ್ಷರಾಗಿ,ನಿರ್ದೇಶಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ.ಸವಣೂರು ಗ್ರಾಮ ಪಂಚಾಯತ್ನಲ್ಲಿ ಸಸತ 15 ವರ್ಷಗಳ ಕಾಲ ಸದಸ್ಯರಾಗಿ ದುಡಿದು ಸವಣೂರಿನ ಅಭಿವೃದ್ದಿಗೆ ತನ್ನದೇ ಆದ ಕೊಡುಗೆ ನೀಡಿದ್ದಾರೆ.ಸವಣೂರು ಯುವಕ ಮಂಡಲದ ಅಧ್ಯಕ್ಷರಾಗಿ ಯುವಕ ಮಂಡಲಕ್ಕೆ ನಿವೇಶನ ಹಾಗೂ ಕಟ್ಟಡ ನಿರ್ಮಾಣ,ಸವಣೂರಿನಲ್ಲಿ ಸುಸಜ್ಜಿತ ವಿನಾಯಕ ಸಭಾಭವನ ನಿರ್ಮಾಣ,ಸುಳ್ಯದಲ್ಲಿ ಯುವಜನ ಸಂಯುಕ್ತ ಮಂಡಳಿಯ ಸ್ಥಾಪಕಾಧ್ಯಕ್ಷರಾಗಿ ಸ್ವಂತ ನಿವೇಶನ ಹಾಗೂ ಕಟ್ಟಡ ನಿರ್ಮಾಣಕ್ಕೆ ಕಾರಣರಾಗಿದ್ದಾರೆ.
ಮಂಗಳೂರಿನ ಶ್ರೀರಾಮಕೃಷ್ಣ ಕ್ರೆಡಿಟ್ಕೋ-ಅಪರೇಟಿವ್.ನ ಸ್ಥಾಪಕ ನಿರ್ದೇಶಕರಾಗಿದ್ದು, ಸತತ 25 ವರ್ಷಗಳಿಂದ ನಿರ್ದೇಶಕರಾಗಿದ್ದಾರೆ.ಪುತ್ತೂರು ಭೂ ಅಭಿವೃದ್ದಿ ಬ್ಯಾಂಕಿನಲ್ಲಿ 6 ವರ್ಷ ನಿರ್ದೇಶಕರಾಗಿ ,ಟಿ.ಎ.ಪಿ.ಎಂ.ಎಸ್ಪುತ್ತೂರು ಇದರಲ್ಲಿ 10 ವರ್ಷ ನಿರ್ದೇಶಕರಾಗಿ,ಮಾಸ್ಇದರಲ್ಲಿ 13 ವರ್ಷ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.
ಸಹಕಾರ ಸಂಘಕ್ಕೆ ಆಡಳಿತಾಧಿಕಾರಿಯಾಗಿ ಸರಕಾರದಿಂದ ನಿಯೋಜನೆಗೊಂಡ ಅವಧಿಯಲ್ಲಿ ಏನೇಕಲ್ಲು,ಪಂಜ,ಪಾಣಾಜೆ ಮತ್ತು ಸವಣೂರು ಸಹಕಾರಿ ಸಂಘದ ಪುನಶ್ಚೇತನಕ್ಕೆ ಶ್ರಮಿಸಿದ್ದಾರೆ.
10 ವರ್ಷಗಳ ಕಾಲ ದ.ಕ.ಜಿಲ್ಲಾ ಕೇಂದ್ರ ಬ್ಯಾಂಕಿನಲ್ಲಿ 10 ವರ್ಷ ನಿರ್ದೇಶಕರಾಗಿ 6 ವರ್ಷ ಉಪಾಧ್ಯಕ್ಷರಾಗಿ,ದ.ಕ.ಹಾಲು ಉತ್ಪಾದಕರ ಒಕ್ಕೂಟದಲ್ಲಿ 18 ವರ್ಷ ನಿರ್ದೇಶಕರಾಗಿ,2.5 ವರ್ಷ ಅಧ್ಯಕ್ಷರಾಗಿ ,ರಾಜ್ಯ ಹಾಲು ಉತ್ಪಾದಕರ ಮಹಾಮಂಡಳಿಯ ನಿರ್ದೇಶಕರಾಗಿ 5 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.
ಸವಣೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 15 ವರ್ಷಗಳ ಕಾಲ ಅಧ್ಯಕ್ಷರಾಗಿ,5 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ.ಪುತ್ತೂರನ್ನು ಕೇಂದ್ರವಾಗಿರಿಸಿಕೊಂಡು ಸೀತಾರಾಮ ರೈ ಅವರು ಸ್ವಂತ ಸಹಕಾರ ಸಂಸ್ಥೆ ಆದರ್ಶ ವಿವಿಧೋದ್ಧೇಶ ಸಹಕಾರಿ ಸಂಘ ಸ್ಥಾಪಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಜಿಲ್ಲೆಯ ವಿವಿದೆಡೆ 12 ಶಾಖೆಗಳನ್ನು ಹೊಂದಿದೆ.
ಸವಣೂರಿನಂತಹ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ಪೂರ್ವ ಪ್ರಾಥಮಿಕದಿಂದ ಅರಂಭಗೊಂಡು ಪದವಿ ಶಿಕ್ಷಣದವರೆಗೆ ಒಂದೇ ಕ್ಯಾಂಪಸ್ ನಲ್ಲಿ ಗುಣಮಟ್ಟದ ಶಿಕ್ಷಣ ದೊರಕುವಂತೆ ಮಾಡಿದ ಹೆಗ್ಗಳಿಕೆ ಇವರದು,ಸವಣೂರಿನಲ್ಲಿ ದೇಶಿಯ ಕ್ರೀಡೆಯಾದ ಲಗೋರಿಯನ್ನು ಬೆಳೆಸುವ ನಿಟ್ಟಿನಲ್ಲಿ 2014ರಿಂದ ನಿರಂತರವಾಗಿ ಜಿಲ್ಲೆ,ರಾಜ್ಯ ಮಟ್ಟದ ಲಗೋರಿ ಪಂದ್ಯಾಟಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ.ಪುತ್ತೂರು ಬಾಲವನದ ಅಭಿವೃದ್ದಿ ಸಮಿತಿಯ ಅಧ್ಯಕ್ಷರಾಗಿ ಈಜುಕೊಳ ನಿರ್ಮಿಸಿ ಆ ಮೂಲಕ ಪುತ್ತೂರಿನಿಂದಲೂ ಅಂತರಾಷ್ಟ್ರೀಯ ಮಟ್ಟದಲ್ಲಿ ಈಜುಪಟುಗಳು ರೂಪುಗೊಳ್ಳುವಂತಾಗಿದೆ.ಸವಣೂರಿನಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ,ತುಳು ಸಾಹಿತ್ಯ ಸಮ್ಮೇಳನ ,ರಾಜ್ಯ ಮಟ್ಟದ ಕಲಾರಶ್ಮಿ ಸಮ್ಮೇಳನ,ರಾಜ್ಯಮಟ್ಟದ ಕೃಷಿ ಮೇಳಗಳನ್ನು ಯಶಸ್ವಿಯಾಗಿ ಆಯೋಜಿಸಿದ್ದಾರೆ.ಧಾರ್ಮಿಕ ಕ್ಷೇತ್ರದಲ್ಲಿಯೂ ಗಣನೀಯ ಸೇವೆ ಸಲ್ಲಿಸಿರುವ ಸೀತಾರಾಮ ರೈ ಅವರು ,ಶಾಂತಿಮೊಗರು ಸುಬ್ರಹ್ಮಣ್ಯ ,ನಾವೂರು ಸುಬ್ರಹ್ಮಣ್ಯ,ಸವಣೂರು ವಿಷ್ಣುಮೂರ್ತಿ,ಮುಗೇರು ಮಹಾವಿಷ್ಣುಮೂರ್ತಿ,ದೇವರ ಕಾನ ಲಕ್ಷ್ಮೀನರಸಿಂಹ,ಪೆರುವಾಜೆ ಜಲದುರ್ಗಾ ದೇವಿ ದೇವಸ್ಥಾನಗಳ ಜೀರ್ಣೋದ್ದಾರ,ಬ್ರಹ್ಮಕಲಶ ಸಮಿತಿಗಳ ಅಧ್ಯಕ್ಷರಾಗಿ ,ಸವಣೂರಿನ ಚಂದ್ರನಾಥ ಬಸದಿ,ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ದೇವಸ್ಥಾನ,ಮಂಚಿ ಕಲ್ಕಾರು ಅಣ್ಣಪ್ಪ ಪಂಜುರ್ಲಿ ದೇವಸ್ಥಾನಗಳ ಅಭಿವೃದ್ದಿಯಲ್ಲೂ ಸೇವೆ ಸಲ್ಲಿಸಿದ್ದಾರೆ.
ಸೀತಾರಾಮ ರೈ ಅವರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ,ದ.ಕ.ಜಿಲ್ಲಾ ಶ್ರೇಷ್ಠ ಸಹಕಾರಿ ಪ್ರಶಸ್ತಿ,ಕುರುಂಜಿ ಸಾಧನ ಶ್ರೀ ಪ್ರಸಸ್ತಿ,ಕನ್ನಡ ಆಭಿವೃದ್ದಿ ಪ್ರಾಧಿಕಾರದ ಸಾಧನಾ ಶ್ರೀ ಪ್ರಶಸ್ತಿ,ಆರ್ಯಭಟ ಪ್ರಶಸ್ತಿ,ವಿಶ್ವ ಚೇತನ ಪ್ರಶಸ್ತಿ, ಕರ್ನಾಟಕ ರಾಜ್ಯದ ಶ್ರೇಷ್ಟ ಸಹಕಾರಿ ಪ್ರಶಸ್ತಿ,ರಾಜೀವ್ಗಾಂಧಿ ಶಿರೋಮಣಿ ಪ್ರಶಸ್ತಿ,ಗಡಿನಾಡ ರಾಜ್ಯ ಪ್ರಶಸ್ತಿ ಮೊದಲಾದ ಹತ್ತು ಹಲವು ಪ್ರಶಸ್ತಿಗೆ ಪಾತ್ರರಾಗಿದ್ದಾರೆ.