ಗೂಗಲ್ ಡೂಡಲ್ ಮೂಲಕ ಗೌರವ ನೀಡುತ್ತಿರುವ ಈ ಮಹಿಳೆ ಯಾರು ಗೊತ್ತೆ ? ಇವರ ಬಗ್ಗೆ ಮುಖ್ಯವಾಗಿ ತಿಳಿಯಿರಿ
ಜಗತ್ತಿನ ಅತಿ ದೊಡ್ಡ ಸರ್ಚ್ ಎಂಜಿನ್ ಆದ ಗೂಗಲ್ (Google) ಸಾಮಾನ್ಯವಾಗಿ ಆಗಾಗ ಜಗತ್ತಿನಲ್ಲಿ ಅತಿ ವಿಶಿಷ್ಟ, ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗುರುತಿಸಿ ಅವರ ಸ್ಮರಣಾರ್ಥ ತನ್ನದೇ ಆದ ರೀತಿಯಲ್ಲಿ ಗೌರವಾರ್ಪಣೆಯನ್ನು
(ಗೂಗಲ್ ಡೂಡಲ್) ಮಾಡುತ್ತಿರುತ್ತದೆ.
ಬುಧವಾರದಂದು ಗೂಗಲ್ ತನ್ನ ಡೂಡಲ್ ಮೂಲಕ ಫ್ರೆಂಚ್ ಕಲಾವಿದೆಯಾಗಿದ್ದ ರೋಸಾ ಬಾನ್ಹರ್ ಅವರಿಗೆ ಗೌರವ ಸೇರ್ಪಣೆ ಮಾಡಿದೆ. ರೋಸಾ ಬಾನ್ಹರ್ ಅವರ 200ನೇ ಜಯಂತಿಯಂದು ಗೂಗಲ್ ಗೌರವಾರ್ಥ ಸಮರ್ಪಿಸಿದೆ. ಈ ರೋಸಾ ಬಾನ್ಹರ್ ಯಾರು ಗೊತ್ತೆ ?
ರೋಸಾ ಅವರೊಬ್ಬರು ಖ್ಯಾತ ವರ್ಣಚಿತ್ರ ಕಲಾವಿದೆ. 19ನೇ ಶತಮಾನದ ಅತಿ ಪ್ರಸಿದ್ಧ ಮಹಿಳಾ ವರ್ಣಚಿತ್ರಕಲಾವಿದರ ಪೈಕಿ ಬಾನ್ಹರ್ ಅವರನ್ನು ಒಬ್ಬರನ್ನಾಗಿ ಪರಿಗಣಿಸಲಾಗಿದೆ.
ಅವರು ಹಲವು ಕಲಾಕೃತಿಗಳನ್ನು ರಚಿಸಿದ್ದು ಅವುಗಳ ಪೈಕಿ “ಪ್ಲಾವಿಂಗ್ ಇನ್ ನಿವರ್ನೈಸ್” ಹಾಗೂ “ದಿ ಹಾರ್ಸ್ ಫೇರ್” ಎಂಬ ಕಲಾಕೃತಿಗಳು ಹೆಚ್ಚಿನ ಜನಪ್ರಿಯತೆ ಗಳಿಸಿವೆ.
1822ರಲ್ಲಿ ಫ್ರಾನ್ಸ್ ದೇಶದ ಬಾರ್ಡ್ಯೂಕ್ಸ್ ಎಂಬಲ್ಲಿ ಜನಿಸಿದ್ದ ರೋಸಾ ಬಾನ್ಹರ್ಒಬ್ಬ ಮಹಿಳಾ ಕಲಾವಿದೆಯಾಗಿ ಅಂದಿನ ಸಮಯದಲ್ಲಿ ಅವರು ಮಾಡಿದ ಸಾಧನೆ, ಗಳಿಸಿದ ಖ್ಯಾತಿ ಅಷ್ಟಿಷ್ಟಲ್ಲ. ಫ್ರೆಂಚ್ ರಾಣಿ ಯುಜೆನ್ ಅವರು 1865 ರಲ್ಲಿ ಆಕೆಗೆ ದೇಶದ ಪ್ರತಿಷ್ಠಿತ ಗೌರವವಾದ “ಲೀಜನ್ ಆಫ್ ಹಾನರ್” ಎಂಬ ಗೌರವದಿಂದ ಸನ್ಮಾನಿಸಿದ್ದರು. ರೋಸಾ ಬಾನ್ಹರ್ 1899 ರಲ್ಲಿ ಅವರು 77 ವರ್ಷದವರಾಗಿದ್ದಾಗ ಕೊನೆಯುಸಿರೆಳೆದಿದ್ದಾರೆ.
1841 ರಿಂದ 1853ರ ವರೆಗೆ ಫ್ರಾನ್ಸ್ ದೇಶದ ಪ್ಯಾರಿಸ್ ಸಲೋನ್ ಎಂಬ ಪ್ರದರ್ಶನೋತ್ಸವದಲ್ಲಿ ಅವರ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. 1849 ರಲ್ಲಿ ಪ್ರದರ್ಶಿತವಾದ ಅವರ “ಪ್ಲಾವಿಂಗ್ ಇನ್ ನಿರ್ವೈನಾಸ್” ಎಂಬ ಕಲಾಕೃತಿ ಸಾಕಷ್ಟು ಜನಮನ್ನಣೆ ಹಾಗೂ ಫ್ರೆಂಚ್ ಸರ್ಕಾರದಿಂದಲೂ ಮನ್ನಣೆಗಳಿಸಿತು. 1853 ರಲ್ಲಿ ಪ್ರದರ್ಶಿತವಾದ ಅವರ ಇನ್ನೊಂದು ಮಾಸ್ಟರ್ ಪೀಸ್ ಎಂದೇ ಹೇಳಲಾಗುವ “ದಿ ಹಾರ್ಸ್ ಫೇರ್” ಎಂಬ ಕಲಾಕೃತಿಯು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು.