ಮಂಗಳೂರು: ಏರ್ಪೋರ್ಟ್ ನಲ್ಲಿ ಬಾಂಬ್ ಇಟ್ಟ ಪ್ರಕರಣ | ಆರೋಪಿ ಆದಿತ್ಯ ರಾವ್ ಗೆ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಲಯ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟು ಆತಂಕ ಸೃಷ್ಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಆದಿತ್ಯ ರಾವ್ ಗೆ ನ್ಯಾಯಾಲಯವು ಇಂದು ಶಿಕ್ಷೆ ಪ್ರಕಟಿಸಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ 1967ರ ಸೆಕ್ಷನ್ 16ರ ಅಡಿಯಲ್ಲಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ವಿಫಲವಾದರೆ 6 ತಿಂಗಳು ಸರಳ ಜೈಲು ಶಿಕ್ಷೆ ವಿಧಿಸಲಾಗಿದೆ. ಸ್ಫೋಟಕ ವಸ್ತುಗಳ ಕಾಯ್ದೆ 1908ರ ಸೆಕ್ಷನ್ 4ರ ಪ್ರಕಾರ 5 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ, ವಿಫಲವಾದರೆ 6 ತಿಂಗಳ ಜೈಲು ಶಿಕ್ಷೆ ವಿಧಿಸಿ ಕೋರ್ಟ್ ಆದೇಶಿಸಿದೆ. ಎರಡೂ ಶಿಕ್ಷೆಗಳನ್ನು ಏಕಕಾಲದಲ್ಲಿ ಅನುಭವಿಸಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.

2020ರ ಜ. 20ರಂದು ಬೆಳಗ್ಗೆ 9.05ರ ಸುಮಾರಿಗೆ ರಿಕ್ಷಾವೊಂದರಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆರೋಪಿ ರಿಕ್ಷಾದಿಂದ ಇಳಿದು ಸ್ಫೋಟಕ ತುಂಬಿದ ಬ್ಯಾಗನ್ನು ನಿಲ್ದಾಣದ ನಿರ್ಗಮನ ದ್ವಾರದ ಸಮೀಪದ ಟಿಕೆಟ್‌ ಕೌಂಟರ್‌ ಬಳಿಯಿರುವ ಆಸನದ ಮೇಲಿರಿಸಿ ಬಳಿಕ ಅಲ್ಲಿಂದ ಪರಾರಿಯಾಗಿದ್ದ. ಸ್ಫೋಟಕ ಇರಿಸಿದ್ದ ಬ್ಯಾಗ್ ಪತ್ತೆಯಾದ ಬಳಿಕ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಆತಂಕ ಸೃಷ್ಟಿಯಾಗಿತ್ತು. ಬಳಿಕ ಬಾಂಬ್ ನಿಷ್ಕ್ರಿಯ ದಳವನ್ನು ಕರೆಸಿ ಬಾಂಬ್ ನಿಷ್ಕ್ರಿಯಗೊಳಿಸಲಾಗಿತ್ತು.

ಬಾಂಬ್ ಅನ್ನು ವಿಮಾನ ನಿಲ್ದಾಣದಲ್ಲಿ ಇರಿಸಿದ ಬಳಿಕ ಆರೋಪಿ ಆದಿತ್ಯ ರಾವ್‌ ಬೆಂಗಳೂರಿಗೆ ತೆರಳಿ ಜ. 22 ರಂದು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರ ಕಚೇರಿಯಲ್ಲಿ ಶರಣಾಗಿದ್ದ. ಬಳಿಕ ಆತನನ್ನು ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಲಾಗಿತ್ತು. ಆನಂತರ ಮಂಗಳೂರು ಪೊಲೀಸ್‌ ತಂಡ ಬೆಂಗಳೂರಿಗೆ ತೆರಳಿ ಆತನನ್ನು ಬಂಧಿಸಿ ಮಂಗಳೂರಿಗೆ ಕರೆ ತಂದಿತ್ತು. ಘಟನೆ ನಡೆದು ಬರೋಬ್ಬರಿ ಎರಡು ವರ್ಷಗಳ ಬಳಿಕ ಆತನಿಗೆ ಶಿಕ್ಷೆ ಪ್ರಕಟವಾಗಿದೆ.

Leave A Reply

Your email address will not be published.