ಪತ್ನಿಯನ್ನು ಹೋಟೆಲ್ ಗೆ ಕರೆದ ಪತಿ| ಖುಷಿಯಿಂದಲೇ ಹೋದ ಪತ್ನಿಗೆ ಕಾದಿತ್ತು ಭೀಕರ ಸಾವು!
ಮಾತನಾಡಲೆಂದು ಪತ್ನಿಯನ್ನು ಹೋಟೆಲ್ಗೆ ಕರೆದು ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆಂಧ್ರ ಪ್ರದೇಶದ ವಿಜಯವಾಡದ ಗಾಂಧಿನಗರದಲ್ಲಿ ನಡೆದಿದೆ.
ಗವರ್ನರ್ ಪೇಟಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ಕಂಚಿಕಚರ್ಲಾ ಮೂಲದ ಶರೊನ್ ಪರಿಮಳ ಎಂಬಾಕೆಯೇ ಬರ್ಬರವಾಗಿ ಹತ್ಯೆಗೀಡಾದ ಮಹಿಳೆ.
2015ರಲ್ಲಿ ವೇಮುಲಪಲ್ಲಿ ವಲಯದ ಉಪ್ಪಾಳ ಪ್ರಸಾದ್ ರಾವ್ ಎಂಬುವರನ್ನು ಮದುವೆ ಆಗಿದ್ದ ಪರಿಮಳ , ಆರಂಭದಲ್ಲಿ ದಂಪತಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ಅನಂತರ ಇಬ್ಬರ ನಡುವೆ ಜಗಳ ಶುರುವಾಗತೊಡಗಿತು. ಅಲ್ಲದೆ, ಪತ್ನಿಯ ಶೀಲ ಶಂಕಿಸಿ, ಆಕೆಗೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳ ನೀಡಲು ಆರಂಭಿಸಿದ ಗಂಡ.
ಕೆಲವೊಮ್ಮೆ ಜಗಳ ಹೆಚ್ಚಾಗಿ ಹಿರಿಯ ಸಮ್ಮುಖದಲ್ಲಿ ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಚೆನ್ನಾಗಿ ನೋಡಿಕೊಳ್ಳುತ್ತೇನೆಂದು ಹೇಳುವುದು ನಂತರ ಪತ್ನಿಯನ್ನು ಮನೆಗೆ ಕರೆತಂದು ಮತ್ತೆ ಕಿರುಕುಳ ಕೊಡಲು ಆರಂಭಿಸುವುದು. ಇದರಿಂದ ಬೇಸತ್ತ ಪರಿಮಳ ಕೊನೆಗೆ ಕಿರುಕುಳವನ್ನು ಸಹಿಸದೇ ಪತಿಯ ವಿರುದ್ಧ ಕಳೆದ ಅಕ್ಟೋಬರ್ನಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಗಂಡನಿಗೆ ಎಚ್ಚರಿಕೆ ನೀಡಿ ಕಳುಹಿಸಿದ್ದರು.
ಅನಂತರ ಪರಿಮಳ ವಿಜಯವಾಡದ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತ ಪ್ರಸಾದ್ ರಾವ್ ಕೂಡ ಕೆಲಸಕ್ಕೆಂದು ದುಬೈಗೆ ತೆರಳಿ ಇದೇ ವರ್ಷ ಜನವರಿಯಲ್ಲಿ ವಾಪಸ್ ಬಂದಿದ್ದ. ಕಳೆದ ಭಾನುವಾರ ರಾತ್ರಿ 10 ಗಂಟೆಗೆ ಪ್ರಸಾದ್ ರಾವ್ ವಿಜಯವಾಡದ ಅಶೋಕ ಹೋಟೆಲ್ ನಲ್ಲಿ ರೂಮ್ ಬುಕ್ ಮಾಡಿ, ಬಳಿಕ ಅಲ್ಲಿಗೆ ಪತ್ನಿ ಪರಿಮಳರನ್ನು ಕರೆಸಿಕೊಂಡಿದ್ದ.
ನಂತರ ಹೊರ ಹೋಗಿ ಮತ್ತೆ ಬಂದ ಪ್ರಸಾದ್ ಜ್ಯೂಸ್ ತರಲು ಹೋಗಿದ್ದೆ ಎಂದು ರಿಸೆಪ್ಶನಿಸ್ಟ್ ನಲ್ಲಿ ಹೇಳಿ, ನಂತರ ವಾಪಾಸ್ ಬಂದು ನನ್ನ ಪತ್ನಿ ಜ್ಯೂಸ್ ಇಷ್ಟಪಡುತ್ತಿಲ್ಲ ಎಂದು ಹೇಳಿ ಮತ್ತೆ ತಡರಾತ್ರಿ 2 ಗಂಟೆ ಹೋಟೆಲ್ನಿಂದ ಹೊರ ಹೋದ. ಈತ ಮರಳಿ ಬಾರದೇ ಇರುವುದನ್ನು ಕಂಡು ಅನುಮಾನಗೊಂಡ ಹೋಟೆಲ್ ರಿಸೆಪ್ಸನಿಸ್ಟ್ ಕೆ. ಸುಧಾಕರ್ ರೆಡ್ಡಿ, ಪ್ರಸಾದ್ ರಾವ್ಗೆ ಫೋನ್ ಮಾಡಿದರು. ಆದರೆ, ಪ್ರಸಾದ್ ರಾವ್ ಫೋನ್ ತೆಗೆಯಲಿಲ್ಲ. ಅಲ್ಲದೆ, ಆತ ಬರದೇ ಇರುವುದನ್ನು ನೋಡಿ, ಅನುಮಾನಗೊಂಡು ಬೆಳಗ್ಗೆ 5.30ಕ್ಕೆ ಕೊಠಡಿಗೆ ಹೋಗಿ ನೋಡಿದಾಗ ಪರಿಮಳ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಶಾಕ್ ಆಗುತ್ತಾರೆ.
ಪರಿಮಳ ದೇಹವನ್ನು ಬ್ಲಾಂಕೆಟ್ನಿಂದ ಕವರ್ ಮಾಡಲಾಗಿತ್ತು. ತಕ್ಷಣ ಸ್ಥಳೀಯ ಪೊಲೀಸ್ ಠಾಣೆಗೆ ಕರೆ ಮಾಡಿ ಮಾಹಿತಿ ತಿಳಿಸುತ್ತಾರೆ. ಇತ್ತ ಪರಿಮಳ ಪತಿ ಅದೇ ದಿನ ಪೊಲೀಸ್ ಠಾಣೆಗೆ ತೆರಳಿ ಶರಣಾಗಿರುತ್ತಾನೆ. ಹೋಟೆಲ್ ರಿಸೆಪ್ಸನಿಸ್ಟ್ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.