ಈ ರಾಜ್ಯದಲ್ಲಿ ಮರುಕಳಿಸಿತು ಗೋವುಗಳ ಮಾರಣಹೋಮ | ವಿಷಪೂರಿತ ಮೇವು ಸೇವಿಸಿ 116 ಜಾನುವಾರುಗಳು ದುರಂತ ಸಾವು !!
ಇಡೀ ದೇಶದಲ್ಲಿ ಹೈನುಗಾರಿಕೆಗೆ ಹೆಸರುವಾಸಿಯಾಗಿರುವ ಗುಜರಾತ್ನಲ್ಲಿ ಹೃದಯ ವಿದ್ರಾವಕ ಘಟನೆಯೊಂದು ಮರುಕಳಿಸಿದ್ದು, ವಿಷಪೂರಿತ ಆಹಾರ ಸೇವಿಸಿ ನೂರಾರು ಮೂಕ ಪ್ರಾಣಿಗಳ ಮಾರಣಹೋಮವೇ ನಡೆದು ಹೋಗಿದೆ.
ಗುಜರಾತ್ನ ಸಬರಕಾಂತ ಜಿಲ್ಲೆಯ ಇಡಾರ್ನ ಪಂಜ್ಪೋಲ್ನಲ್ಲಿ ವಿಷವಾದ ಮೇವನ್ನು ತಿಂದು 116 ಹಸುಗಳು ಸಾವನ್ನಪ್ಪಿವೆ ಎಂದು ರಾಜ್ಯ ಸರ್ಕಾರ ವಿಧಾನಸಭೆಗೆ ತಿಳಿಸಿದೆ. 15 ದಿನಗಳ ಹಿಂದೆ ಈ ಘಟನೆ ನೆಡೆದಿದ್ದು, ವಿಧಾನಸಭೆಗೆ ಪ್ರಸ್ತುತ ಮಾಹಿತಿ ಲಭಿಸಿದೆ. ಸತ್ತ ಜಾನುವಾರುಗಳಲ್ಲಿ ಹಸುಗಳು, ಎತ್ತುಗಳು ಮತ್ತು ಕರುಗಳು ಒಳಗೊಂಡಿವೆ ಎಂದು ವರದಿಯಾಗಿದೆ.
ಗುಜರಾತ್ ವಿಧಾನಸಭೆಯ ನಿಯಮ 116ರ ಅಡಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಶಾಸಕ ರಾಜೇಂದ್ರ ಸಿಂಗ್ ಠಾಕೂರ್, ಹಸಿರು ಮೇವಾಗಿ ಬಳಸುವ ಮೆಕ್ಕೆಜೋಳವನ್ನು ತಿಂದು ಜಾನುವಾರುಗಳು ಸಾವನ್ನಪ್ಪಿವೆ ಎಂದು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. 24 ಗಂಟೆಗೂ ಹೆಚ್ಚು ಕಾಲ ಮೆಕ್ಕೆಜೋಳದ ಹಸಿರು ಮೇವು ಶೇಖರಣೆಯಾಗಿರುವುದರಿಂದ ವಿಷಪೂರಿತವಾಗಿದೆ ಎಂದು ಶಾಸಕರು ತಿಳಿಸಿದರು. ನೂರಾರು ಹಸುಗಳ ಸಾವಿಗೆ ಸಂಬಂಧಿಸಿದಂತೆ ಸ್ಥಳೀಯ ಅಧಿಕಾರಿಗಳ ವಿರುದ್ಧ ಯಾವುದಾದರೂ ಕ್ರಮ ಕೈಗೊಳ್ಳಲಾಗಿದೆಯೇ ಎಂದು ತಿಳಿಸಬೇಕೆಂದು ಶಾಸಕ ರಾಜೇಂದ್ರ ಸಿಂಗ್ ಠಾಕೂರ್ ಹೇಳಿದರು.
ವಿಷವಾದ ಮೆಕ್ಕೆಜೋಳದ ಹಸಿರನ್ನು ಮೇವಾಗಿ ಸೇವಿಸಿದ 116 ಜಾನುವಾರಗಳ ಪೈಕಿ 101 ಜಾನುವಾರುಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಪ್ರಾಥಮಿಕ ಚಿಕಿತ್ಸೆ ವೇಳೆ 15 ಇತರೆ ಹಸುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ. ಈ ಬಗ್ಗೆ ಕೃಷಿ ಮತ್ತು ಪಶುಸಂಗೋಪನೆ ಸಚಿವ ರಾಘವಜಿ ಪಟೇಲ್ ಅಧಿಕೃತ ಮಾಹಿತಿ ನೀಡಿದ್ದಾರೆ. ಸತ್ತ ಜಾನುವಾರುಗಳು ಹಸುಗಳು, ಎತ್ತುಗಳು ಮತ್ತು ಕರುಗಳನ್ನು ಒಳಗೊಂಡಿವೆ ಎಂದು ಹೇಳಿದರು.
ಮಾರ್ಚ್ 2 ರಂದು ಜಾನುವಾರುಗಳಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರಿಂದ 114 ಹಸುಗಳನ್ನು ಉಳಿಸಲಾಗಿದೆ ಎಂದು ಅವರು ಹೇಳಿದರು. ಮೂರು ಜಾನುವಾರುಗಳ ಮರಣೋತ್ತರ ಪರೀಕ್ಷೆಯಲ್ಲಿ ಹಸುಗಳು ಸೇವಿಸಿದ ಮೆಕ್ಕೆಜೋಳದ ಹಸಿರು ಮೇವಿನಲ್ಲಿ ವಿಷ ಕಾಣಿಸಿಕೊಂಡಿದೆ ಎಂದು ಸಚಿವರು ಹೇಳಿದರು. ಪೂರಕ ಪ್ರಶ್ನೆಗಳಿಗೆ ಉತ್ತರಿಸಿದ ಪಟೇಲ್, ಹಸುಗಳ ಪಾಲನೆಗಾಗಿ 2.68 ಕೋಟಿ ರೂ.ಗಳನ್ನು ಸಂಬಂಧಪಟ್ಟ ಪಂಜರಪೋಲ್ಗೆ ನೀಡಲಾಗಿದೆ ಎಂದು ಹೇಳಿದರು.
2019ರಲ್ಲೂ ಇದೇ ಘಟನೆ ನಡೆದಿತ್ತು
ಇನ್ನು ಗುಜರಾತ್ನಲ್ಲಿ 2019ಲ್ಲೂ ಇದೇ ರೀತಿಯ ಘಟನೆ ನಡೆದಿತ್ತು. ಮೆಹ್ಸಾನಾ ನಗರದ ಹೊರವಲಯದಲ್ಲಿರುವ ದನದ ಕೊಟ್ಟಿಗೆಯಲ್ಲಿ ಜೋಳದ ಗಿಡಗಳ ಮೇವನ್ನು ಸೇವಿಸಿ 109 ಎಮ್ಮೆಗಳು ಮತ್ತು ಕರುಗಳು ಸಾವನ್ನಪ್ಪಿದ್ದವು. ರಾಧನ್ಪುರ ರಸ್ತೆಯಲ್ಲಿರುವ ದನದ ಕೊಟ್ಟಿಗೆಯಲ್ಲಿ ಜಾನುವಾರಗಳ ಸಾವು ಸಂಭವಿಸಿತ್ತು. ಮೇವು ತಿನ್ನುತ್ತಲೇ ಪ್ರಾಣಿಗಳು ಕೊಟ್ಟಿಗೆಯಲ್ಲಿ ಕುಸಿಯಲು ಪ್ರಾರಂಭಿಸಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು. ಸತ್ತ 109 ಎಮ್ಮೆಗಳಲ್ಲಿ 85 ಕರುಗಳು ಎಂದು ವರದಿ ಆಗಿತ್ತು.