ಪುತ್ತೂರು : ಭಜನಾ ಮಂದಿರ ವಿವಾದ| ಮಹಿಳೆ ಮೇಲೆ ಹುಲ್ಲು ಕೊಯ್ಯುವ ಮೆಶಿನ್ ನಿಂದ ಹಲ್ಲೆ!
ಪುತ್ತೂರು : ತಾಲೂಕಿನ ಆರ್ಯಾಪು ಗ್ರಾಮದ ದೊಡ್ಡಡ್ಕ ಎಂಬಲ್ಲಿ ವಿವಾದಿತ ಭಜನಾ ಮಂದಿರದ ವಿಷಯದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು ಹುಲ್ಲು ತೆಗೆಯುವ ಮಿಷಿನ್ ನಿಂದ ಮಹಿಳೆ ಮೇಲೆ ಹಲ್ಲೆ ನಡೆದ ಘಟನೆಯೊಂದು ನಡೆದಿದೆ.
ತೀವ್ರವಾಗಿ ಗಂಭೀರ ಹಲ್ಲೆಗೊಳಗಾದ ಮಹಿಳೆಯನ್ನು ಸರೋಜಿನಿ ಎಂದು ಗುರುತಿಸಲಾಗಿದೆ. ಗಾಯಾಳುವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೂವಪ್ಪ ನಾಯ್ಕ ಮತ್ತು ತಂಡದ ವಿರುದ್ಧ ಹಲ್ಲೆ ಆರೋಪ ದಾಖಲಾಗಿದ್ದು, ತೀವ್ರವಾಗಿ ಹಲ್ಲೆಗೊಳಗಾದ ಸರೋಜಿನಿ ವಿರುದ್ಧ ಕೂಡಾ ಪ್ರತಿದೂರು ದಾಖಲಿಸಲಾಗಿದೆ.
ಭಜನಾ ಮಂದಿರ ಇರುವ ಜಾಗ ತಮ್ಮದು ಎಂದು ಸರೋಜಿನಿಯವರ ವಾದ ಆಗಿದ್ದು, ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಇದುವೇ ಹಲ್ಲೆಗೆ ಕಾರಣ ಎನ್ನಲಾಗಿದೆ.
ಭಜನಾ ಮಂದಿರದಲ್ಲಿ ಯಾವುದೇ ಕಾರ್ಯಕ್ರಮ ಮಾಡಬಾರದೆಂದು ತಡೆಯಾಜ್ಞೆ ತಂದಿದ್ದರೂ ಮಂದಿರದಲ್ಲಿ ಪೂವಪ್ಪ ನಾಯ್ಕ್ ಮತ್ತು ತಂಡ ಕಾಮಗಾರಿ ನಡೆಸುತ್ತಿದ್ದರು. ಇದನ್ನು ಪ್ರಶ್ನಿಸಲು ಹೋದ ಸರೋಜಿನಿ ಅವರ ಮೇಲೆ ಹುಲ್ಲು ತೆಗೆಯುವ ಯಂತ್ರದಿಂದಲೇ ದಾಳಿ ಮಾಡಲಾಗಿದೆ.
ಮಹಾಲಕ್ಷ್ಮಿ ಭಜನಾ ಮಂದಿರದ ಸದಸ್ಯರಾಗಿರುವ ಪೂವಪ್ಪ ನಾಯ್ಕ ಅವರು ಭಜನಾ ಮಂದಿರದ ಸುತ್ತ ಬೆಳೆದಿರುವ ಹುಲ್ಲು ತೆಗೆದು ಸ್ವಚ್ಛಗೊಳಿಸಲು ತೆರಳಿದ ಸಂದರ್ಭದಲ್ಲಿ ಹತ್ತಿರದ ಮನೆಯ ನಾಗರಾಜ ಆಚಾರ್ಯ, ನಾರಾಯಣ ಆಚಾರ್ಯ, ಸರೋಜಿನಿ, ನಾಗರಾಜ ಆಚಾರ್ಯ ಅವರ ಪತ್ನಿ ಮತ್ತು ಅತ್ತಿಗೆ ತಕರಾರು ಮಾಡಿದ್ದು, ಮಾರಕಾಯುಧಗಳನ್ನು ತಂದು ಪೂವಪ್ಪ ನಾಯ್ಕ ಮತ್ತು ಅವರ ಪತ್ನಿ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಜೊತೆಗೆ ಜಾತಿ ನಿಂದನೆ ಮಾಡಿದ್ದಾರೆ ಎಂಬ ಆರೋಪ
ಮಾಡಲಾಗಿದೆ.
ಈ ಬಗ್ಗೆ ಇವರುಗಳ ಮೇಲೆ ಪೂವಪ್ಪ ನಾಯ್ಕ ಪ್ರತಿದೂರನ್ನು ಸಲ್ಲಿಸಿದ್ದಾರೆ. ಇತ್ತ ಕಡೆ ಸರೋಜಿನಿ ಅವರು ಸಂಪ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ ವೆಂಕಟಕೃಷ್ಣ ಭಟ್, ಸೇಸಪ್ಪ ನಾಯ್ಕ ಹಾಗೂ ಸಂಗಡಿಗರ ವಿರುದ್ಧ ದೂರು ನೀಡಿದ್ದಾರೆ.
ಈ ವಿವಾದಿತ ಜಾಗದ ಕೇಸ್ 10 ವರ್ಷದ ಹಿಂದೆನೇ ದಾಖಲು ಮಾಡಲಾಗಿತ್ತು. ಕೋರ್ಟ್ ನಿಂದ ತಡೆಯಾಜ್ಞೆ ತಂದಿದ್ದರೂ ಅಲ್ಲಿ ದೊಡ್ಡಡ್ಕ ನಿವಾಸಿ ಪೂವಪ್ಪ ನಾಯ್ಕ ಅವರ ಸಂಗಡಿಗರು ಆ ಜಾಗದಲ್ಲಿ ಕಾರ್ಯ ನಿರ್ವಹಿಸಲು ಬಂದಿದ್ದಾರೆ. ಈ ಸಮಯದಲ್ಲಿ ಪ್ರಶ್ನಿಸಲು ಹೋದ ಸರೋಜಿನಿ ಹಾಗೂ ಇತರರ ಮೇಲೆ ಹಲ್ಲೆ ಆಗಿದೆ.