ಸುಳ್ಯ : ಬೆಳ್ಳಂಬೆಳಗ್ಗೆ ಡಿಪೋಗೆ ಹಾಲು ತಗೊಂಡು ಹೋಗುತ್ತಿದ್ದ ಯುವಕನ ಮೇಲೆ ಆನೆ ದಾಳಿ| ಯುವಕನ ಸ್ಥಿತಿ ಚಿಂತಾಜನಕ
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಎಂಬಲ್ಲಿ ಒಂಟಿ ಕಾಡಾನೆಯೊಂದು ಡಿಪ್ಪೊಗೆ ಹಾಲು ತೆಗೆದುಕೊಂಡು ಹೋಗುತ್ತಿದ್ದ ಯುವಕನ ಮೇಲೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ ಘಟನೆಯೊಂದು ಮಾ.13 ರ ಮುಂಜಾನೆ ನಡೆದಿದೆ.
ಕೊಲ್ಲಮೊಗ್ರು ಗ್ರಾಮದ ಕೋನಡ್ಕ ನಿವಾಸಿ ಗುರುಪ್ರಸಾದ್ ( 21) ಆನೆ ದಾಳಿಗೆ ತುತ್ತಾಗಿ ಗಾಯಗೊಂಡ ಯುವಕ. ತನ್ನ ಮನೆಯಿಂದ ಅಂದಾಜು 1.5 ಕಿ.ಮೀ.ದೂರದಲ್ಲಿರುವ ಹಾಲಿನ ಡಿಪ್ಪೋಗೆ ಬೈಕಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಆನೆ ಇದ್ದಕ್ಕಿದ್ದಂತೆ ದಾಳಿ ಮಾಡಿದೆ. ಈ ಘಟನೆ ಸುಮಾರು ಬೆಳಿಗ್ಗೆ 7 ರ ಸಮಯದಲ್ಲಿ ನಡೆದಿದೆ. ಕೊಲ್ಲಮೊಗ್ರು ಹಾಲಿನ ಡಿಪ್ಪೋಕ್ಕಿಂತ 500 ಮೀಟರ್ ದೂರದಲ್ಲಿ ಇಡ್ನೂರು ಎಂಬಲ್ಲಿ ಈ ದಾಳಿ ನಡೆದಿದೆ.
ಯುವಕನನ್ನು 50 ಮೀ ದೂರದವರೆಗೆ ಆನೆ ತನ್ನ ಸೊಂಡಿಲಿನ ಸಹಾಯದಿಂದ ಎಳೆದುಕೊಂಡು ಹೋಗಿದೆ. ಇದನ್ನು ಗಮನಿಸಿದ ಅಡಿಕೆ ಕೀಳಲು ಹೋಗುತ್ತಿದ್ದ ಕಾರ್ಮಿಕರೋರ್ವರು ಜೋರಾಗಿ ಕಿರುಚಾಡಿದ್ದಾರೆ. ಈ ವೇಳೆ ಆನೆ ಯುವಕನನ್ನು ಬಿಟ್ಟು ನಿರ್ಗಮಿಸಿದೆ. ನಂತರ ಗಾಯಾಳು ಯುವಕನನ್ನು ಜೀಪಿನ ನೆರವಿನಿಂದ ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು, ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಕೊಲ್ಲಮೊಗ್ರು ಗ್ರಾಮದಲ್ಲಿ ನಾಲ್ಕು ತಿಂಗಳ ಅಂತರದಲ್ಲಿ ಮನುಷ್ಯನ ಮೇಲಿನ ಆನೆಯ ಎರಡನೇ ದಾಳಿ ಇದಾಗಿದೆ. ನಾಲ್ಕು ತಿಂಗಳ ಹಿಂದೆ ಆನೆ ದಾಳಿಗೆ ತುತ್ತಾದ ವಯೋವೃದ್ಧರೊಬ್ಬರು ಸಾವನ್ನಪ್ಪಿದ್ದರು.