ಕಳೆದು ಹೋದ ಮಾತು ಬಾರದ ಮಗನನ್ನು ಮತ್ತೆ ತಾಯಿ ಮಡಿಲಿಗೆ ಸೇರಿಸಿದ ‘ ಆಧಾರ್ ಕಾರ್ಡ್ ‘ |

ಬೆಂಗಳೂರು ನಗರದಲ್ಲಿ ಕಳೆದುಹೋಗಿದ್ದ ಮಾತು ಬಾರದ ಮಗನನ್ನು ಮತ್ತೆ ತಾಯಿಯ ಮಡಿಲಿಗೆ ಸೇರಿಸಲು ಆಧಾರ್ ಕಾರ್ಡ್ ಉಪಯೋಗಕ್ಕೆ ಬಂದಿದೆ. ಬರೋಬ್ಬರಿ 6 ವರ್ಷದ ಬಳಿಕ ತಾಯಿಯನ್ನು ಸೇರಿದ ಮಗ ಭರತ್ ಇದೀಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ.

 

ಯಲಹಂಕ ಬಳಿಯ ಸಿಂಗನಾಯಕನಹಳ್ಳಿ ತರಕಾರಿ ಮಾರುಕಟ್ಟೆಯಲ್ಲಿ ಪಾರ್ವತಮ್ಮ ಅವರ ಪುತ್ರ ಭರತ್ 2016 ರಲ್ಲಿ ನಾಪತ್ತೆಯಾಗಿದ್ದ. ಮನೆ ಮಂದಿ ಎಷ್ಟು ಹುಡುಕಾಡಿದರೂ ಭರತ್ ಸಿಕ್ಕಿರಲಿಲ್ಲ. ಹೀಗಾಗಿ ಪಾರ್ವತಮ್ಮ ಅನಿವಾರ್ಯವಾಗಿ ಯಲಹಂಕ ಠಾಣೆಯಲ್ಲಿ ಕಿಡ್ನ್ಯಾಪ್ ಕೇಸ್ ದಾಖಲಿಸಿದ್ದರು.

ಯಲಹಂಕದಿಂದ ನಾಗಪುರ ರೈಲ್ವೇ ನಿಲ್ದಾಣಕ್ಕೆ ಹೋಗಿದ್ದ ಭರತ್ ರೈಲ್ವೇ ಭದ್ರತಾ ಪಡೆ ಅಧಿಕಾರಿಗಳಿಗೆ ಸಿಕ್ಕಿದ್ದ. ನಂತರ ಅವರು ಆತನಿಗೆ ಆಶ್ರಯ‌ ಕೊಟ್ಟಿದ್ದರು. 6 ವರ್ಷಗಳ ಬಳಿಕ ಆಧಾರ್ ಕಾರ್ಡ್ ಮಾಡಿಸಲು ಬೆರಳು ಮುದ್ರೆ ಪಡೆದುಕೊಳ್ಳಲು ಹೋದಾಗ, ಈತನ ಹೆಸರಲ್ಲಿ ಅದಾಗಲೇ ಆಧಾರ್ ಮಾಡಿಸಿರುವುದು ಪತ್ತೆಯಾಗುತ್ತದೆ. ಆಧಾರ್ ನಲ್ಲಿದ್ದ ವಿಳಾಸ ಸಂಪರ್ಕಿಸಿದ ಅಧಿಕಾರಿಗಳು ಭರತ್ ತಾಯಿ ಪಾರ್ವತಮ್ಮಗೆ ಕರೆ ಮಾಡಿ ವಿಷಯ ತಿಳಿಸಿದರು. ಅಧಿಕಾರಿಗಳ ನೆರವಿನಿಂದ ಭರತ್ ತಾಯಿಯ ಮಡಿಲು ಸೇರುವಲ್ಲಿ ಯಶಸ್ವಿಯಾದರು.

ಯಲಹಂಕದ ರೈಲ್ವೇ ಸಂತೆಯಲ್ಲಿ ತರಕಾರಿ ಮಾರಾಟದ ವೇಳೆ ಪಾರ್ವತಮ್ಮ ಮಗನನ್ನು ಕಳೆದುಕೊಂಡಿದ್ದರು. ಯಲಹಂಕದಲ್ಲಿ ನಾಪತ್ತೆಯಾಗಿದ್ದ ಭರತ್ 10 ತಿಂಗಳ ಬಳಿಕ ಹೇಗೋ ನಾಗಪುರಕ್ಕೆ ಸೇರಿದ್ದ. ಅಲ್ಲಿ ದಿಕ್ಕಿಲ್ಲದೇ ಓಡಾಡುತ್ತಿದ್ದ ಈತನನ್ನು ಕಂಡು ಭದ್ರತಾ ಪಡೆ ಅಧಿಕಾರಿಗಳು ಅವನನ್ನು ಪುನರ್ವಸತಿ ಕೇಂದ್ರಕ್ಕೆ ಸೇರಿಸಿದ್ದರು.

ನಂತರ ಆಧಾರ್ ಕಾರ್ಡ್ ಮಾಡಿಸಲು ಹೋದಾಗ ಈತನ ಮನೆಯ ಅಡ್ರೆಸ್ ತಿಳಿಯಿತು.

Leave A Reply

Your email address will not be published.