EVM ಗಳಲ್ಲಿ ಸಮಸ್ಯೆಯಿಲ್ಲ, ಜನರ ತಲೆಯೊಳಗಿನ ಚಿಪ್ಪಿನಲ್ಲಿ ಸಮಸ್ಯೆಯಿದೆ, ಉತ್ತರ ಪ್ರದೇಶದ ಫಲಿತಾಂಶದ ಬಗ್ಗೆ ಓವೈಸಿ ಪ್ರತಿಕ್ರಿಯೆ

ಲಕ್ನೋ: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಭಾರಿ ಗೆಲುವು ಸಾಧಿಸಿದೆ. ಈ ಕುರಿತು ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಅವರು ಪ್ರತಿಕ್ರಿಯಿಸಿದ್ದಾರೆ. ವಿಶೇಷವೆಂದರೆ ಅವರು ಎಲ್ಲಾ ಇತರ ಸೋತ ಪಕ್ಷಗಳಂತೆ ಓಟಿಂಗ್ ಮೆಷಿನ್ ಅನ್ನು ದೂರದೆ, ಜನರ ತಲೆಯಲ್ಲಿ ಇರುವ ಚಿಪ್ಪು ಸರಿಯಿಲ್ಲ ಅಂದಿದ್ದಾರೆ. ನೇರವಾಗಿಯೇ, ಜನರಿಗೆ ಮಂಡೆ ಸಮ ಇಲ್ಲ ಅಂದಿದ್ದಾರೆ.

“ಈಗ ಎಲ್ಲಾ ರಾಜಕೀಯ ಪಕ್ಷಗಳು ಇವಿಎಂ ಸಮಸ್ಯೆಗಳನ್ನು ಎತ್ತಿ ತೋರಿಸುವ ಮೂಲಕ ತಮ್ಮ ಸೋಲನ್ನು ಮರೆಮಾಚಲು ಪ್ರಯತ್ನಿಸುತ್ತಿವೆ. ಆದರೆ ಇದು ಇವಿಎಂ ಸಮಸ್ಯೆಯಲ್ಲ, ಜನರ ತಲೆಯಲ್ಲಿರುವ ಚಿಪ್ಪಿನ ಸಮಸ್ಯೆ. ಬಿಜೆಪಿ ಯಶಸ್ವಿಯಾಗಿರುವುದು 80-20. ನಾವು ನಾಳೆಯಿಂದಲೇ ಮತ್ತೆ ಕೆಲಸ ಮಾಡಲು ಪ್ರಾರಂಭಿಸುತ್ತೇವೆ. ಮುಂದಿನ ಬಾರಿ ಉತ್ತಮ ಸಾಧನೆ ಮಾಡುತ್ತೇವೆ ಎಂಬ ನಂಬಿಕೆ ಇದೆ” ಎಂದು ಓವೈಸಿ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಅಲ್ಪಸಂಖ್ಯಾತರನ್ನು ಕೇವಲ ವೋಟ್‌ ಬ್ಯಾಂಕ್‌ಗಾಗಿ ಬಳಸಿಕೊಳ್ಳಲಾಗುತ್ತಿದೆ. ಲಖಿಂಪುರ್‌ ಖೇರಿಯಲ್ಲೂ ಬಿಜೆಪಿ ಗೆದ್ದಿದೆ. ಅದಕ್ಕಾಗಿಯೇ 80-20 ಗೆಲುವು ಎಂದು ಹೇಳುತ್ತಿದ್ದೇನೆ. ಈ 80-20 ಪರಿಸ್ಥಿತಿಯು ವರ್ಷಗಳವರೆಗೆ ಇರುತ್ತದೆ. ಅದನ್ನು ಜನ ಅರ್ಥ ಮಾಡಿಕೊಳ್ಳಬೇಕು. ನಮ್ಮ ಉತ್ಸಾಹ ಇನ್ನೂ ಹೆಚ್ಚಿದೆ ಎಂದು ಹೇಳಿದ್ದಾರೆ. ಬಿಜೆಪಿಗೆ ಅಧಿಕಾರ ನೀಡಲು ಯುಪಿ ಜನತೆ ನಿರ್ಧರಿಸಿದ್ದಾರೆ. ಜನತೆಯ ನಿರ್ಧಾರವನ್ನು ನಾನು ಗೌರವಿಸುತ್ತೇನೆ. ಎಐಎಂಐಎಂನ ರಾಜ್ಯಾಧ್ಯಕ್ಷರು, ಕಾರ್ಯಕರ್ತರು, ಸದಸ್ಯರು ಮತ್ತು ನಮಗೆ ಮತ ಹಾಕಿದ ಎಲ್ಲರಿಗೂ ಧನ್ಯವಾದ ಸಲ್ಲಿಸುತ್ತೇನೆ. ನಮ್ಮ ಪ್ರಯತ್ನಗಳು ಸಾಕಷ್ಟಿತ್ತು. ಆದರೆ ಫಲಿತಾಂಶಗಳು ನಮ್ಮ ನಿರೀಕ್ಷೆಗೆ ತಕ್ಕಂತೆ ಬರಲಿಲ್ಲ. ನಾವು ಮತ್ತೆ ಕಷ್ಟಪಟ್ಟು ಕೆಲಸ ಮಾಡುತ್ತೇವೆ ಎಂದು ಆಶಯ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‌ ಬಗ್ಗೆ ಮಾತನಾಡುವ ಮೂಲಕ ನಾನು ಯಾಕೆ ಅವರನ್ನು ಗೌರವಿಸಬೇಕು ಎಂದು ಪ್ರಶ್ನಿಸಿದ್ದಾರೆ. ಈ ಸಂಧರ್ಭದಲ್ಲಿ,
ಬಹುಜನ ಸಮಾಜ ಪಕ್ಷವನ್ನು ವಿಸರ್ಜಿಸಿದರೆ ಪ್ರಜಾಪ್ರಭುತ್ವಕ್ಕೆ ದೊಡ್ದ ಹಾನಿ ಆಗಲಿದೆ ಎಂದಿದ್ದಾರೆ ಓವೈಸಿ.

Leave A Reply

Your email address will not be published.