30 ವರ್ಷಗಳ ಬಳಿಕ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಂತಕನಿಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್!
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಎ ಜಿ ಪೆರಾರಿವಾಲನ್ ಗೆ ಸುಪ್ರೀಂ ಕೋರ್ಟ್ ಬುಧವಾರ ಜಾಮೀನು ನೀಡಿದೆ. ಪೆರಾರಿವಾಲನ್ ಸೆರೆವಾಸದಲ್ಲಿ 30 ವರ್ಷ ಕಾಲ ಕಳೆದಿದ್ದಾನೆ. ಪರೋಲ್ ಮೇಲೆ ಹೊರ ಬಂದದ್ದನ್ನು ಹೊರತುಪಡಿಸಿದರೆ ಉಳಿದಂತೆ ನಾಲ್ಕು ಗೋಡೆಯ ನಡುವೆಯೇ ಅರ್ಧ ಜೀವನ ಸವೆಸಿದ್ದಾನೆ.
ಪೆರಾರಿವಾಲನ್ ಗೆ ಕೋರ್ಟ್ ಗಲ್ಲುಶಿಕ್ಷೆ ವಿಧಿಸಿತ್ತು. ನಂತರ 2014 ರಲ್ಲಿ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಲಾಗಿತ್ತು. ನ್ಯಾಯಾಲಯ ಷರತ್ತಿನ ಜಾಮೀನು ನೀಡಿದೆ. ಚೆನ್ನೈ ಸಮೀಪದ ಸ್ಥಳೀಯ ಪೊಲೀಸ್ ಠಾಣೆ ಮುಂದೆ ಪ್ರತಿತಿಂಗಳು ಹಾಜರಾಗಿ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಲಾಗಿದೆ.
ಸೆರೆವಾಸದ ಅವಧಿಯಲ್ಲಿಯೇ ಪೆರಾರಿವಾಲನ್ ಓದು ಮುಂದುವರಿಸಿ ಪದವಿ ಪಡೆದಿದ್ದಾನೆ. 32 ವರ್ಷದಲ್ಲಿ ಮೂರು ಬಾರಿ ಪರೋಲ್ ಪಡೆದು ಹೊರ ಬಂದಿದ್ದರೂ ಒಂದು ಬಾರಿಯೂ ಆತನ ನಡತೆಯಲ್ಲಿ ಕುಂದು ಕಾಣಿಸಿರಲಿಲ್ಲ. ಇತ್ತೀಚೆಗೆ ಆರೋಗ್ಯ ಕೂಡಾ ಕ್ಷೀಣಿಸಿದ್ದು ಪದೇಪದೇ ಆಸ್ಪತ್ರೆಗೆ ದಾಖಲಾಗುತ್ತಿದ್ದನಂತೆ. ವಕಿಲರಿಂದ ಈ ಎಲ್ಲಾ ಮಾಹಿತಿ ಪಡೆದ ಸುಪ್ರೀಂ ಕೋರ್ಟ್ ನ್ಯಾಯಪೀಠ ಜಾಮೀನು ನೀಡಿತು.