ಮಲ್ಪೆ ಬಂದರಿನಲ್ಲಿ ಮೀನುಗಾರರ ಬಲೆಗೆ ಬಿದ್ದ 250 ಕೆಜಿ ತೂಕದ ಗರಗಸ ಶಾರ್ಕ್ ಮೀನು!!!
ಉಡುಪಿ : ಇಲ್ಲಿ ಮಲ್ಪೆ ಬಂದರಿನಲ್ಲಿ 250 ಕೆಜಿ ತೂಕದ ಅಪರೂಪದ ಮೀನು ಪತ್ತೆಯಾಗಿದೆ. ತನ್ನ ಗಾತ್ರ ಮಾತ್ರವಲ್ಲ ನೋಡಲು ಕೂಡಾ ಭಯಾನಕವಾಗಿ ತೋರುವ ಈ ಮೀನು ಬಂದರಿನಲ್ಲಿ ನೆರೆದಿದ್ದ ಮೀನುಗಾರರ ಅಚ್ಚರಿಗೆ ಕಾರಣವಾಗಿದೆ.
ಮೀನು ಹಿಡಿಯಲು ತೆರಳಿದ್ದ ಸೀ ಕ್ಯಾಪ್ಟನ್ ಎಂಬ ಲೈಲ್ಯಾಂಡ್ ಬೋಟಿನವರು ಬೀಸಿದ ಬಲೆಯಲ್ಲಿ ಭಾರೀ ಗಾತ್ರದ ಮೀನು ಸಿಲುಕಿದೆ.
ಸ್ಥಳೀಯ ಭಾಷೆಯಲ್ಲಿ ಗರಗಸ ಮೀನು ಎಂದು ಕರೆಯಲಾಗುವ ಈ ಮೀನಿಗೆ ಗರಗಸ ಶಾರ್ಕ್ ಎಂದೂ ಹೇಳುತ್ತಾರೆ. ಹತ್ತು ಅಡಿಗೂ ಅಧಿಕ ಉದ್ದದ ಮೀನಿನ, ಬಾಯಿಂದ ಗರಗಸ ಮಾದರಿಯ, ಮೊನಚಾದ ಹಲ್ಲುಗಳು ಹೊರ ಬಂದಿದೆ.
ಈ ಮೀನು ಅಪಾಯದ ಅಂಚಿನಲ್ಲಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ ನಿಯಮಗಳ ಅನುಸಾರ ಅನುಬಂಧ 1 ರಲ್ಲಿ ಗುರುತಿಸಲಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.