50ರ ಹರೆಯದವನಿಂದ 18ರ ಯುವತಿಯ ಮೇಲೆ ನಿರಂತರ ಅತ್ಯಾಚಾರ| ಗರ್ಭಪಾತ ಮಾತ್ರೆಯ ಅಡ್ಡಪರಿಣಾಮ ಯುವತಿ ಸಾವು
18 ರ ಹರೆಯದ ಯುವತಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಲ್ಲದೇ, ಗರ್ಭಪಾತದ ಮಾತ್ರೆ ನೀಡಿದ್ದರಿಂದ ಆಕೆ ದುರಂತ ಸಾವಿಗೀಡಾದ ಘಟನೆ ತುಮಕೂರಿನಲ್ಲಿ ಬೆಳಕಿಗೆ ಬಂದಿದೆ.
ಆರೋಪಿ ಮಾಜಿ ಕಾರ್ಪೋರೇಟರ್ ಮತ್ತು ಕಾಂಗ್ರೆಸ್ ಕಾರ್ಯಕರ್ತನಾಗಿರುವ ರಾಜೇಂದ್ರ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಸಿಎಸ್ ಐ ಚರ್ಚ್ ತುಮಕೂರು ಇಲ್ಲಿನ ಸಭಾಪಾಲನಾ ಸದಸ್ಯನಾಗಿರುವ ರಾಜೇಂದ್ರಕುಮಾರ್, 2013 ರಿಂದ 2018 ರ ನಡುವೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ತುಮಕೂರು ಪಾಲಿಕೆಯಲ್ಲಿ ನಾಮನಿರ್ದೇಶಿತ ಸದಸ್ಯನೂ ಆಗಿದ್ದ. ಈ ಸಮಯದಲ್ಲಿ ತುಮಕೂರು ಜಿಲ್ಲಾಧಿಕಾರಿ ಕಚೇರಿಯ ಬಳಿ ಟೈಪಿಸ್ಟ್ ಆಗಿ ಕೆಲಸ ಮಾಡುತ್ತಿದ್ದ ಸಂತೋಷಿ ಸ್ಟೆಲ್ಲ ಎಂಬ ಮಹಿಳೆಯ ಪರಿಚಯ ಆಗಿತ್ತು. ತಾನು ಚರ್ಚ್ ಕಮಿಟಿಯ ಸದಸ್ಯನೆಂದು ಪರಿಚಯ ಮಾಡಿಕೊಂಡಿದ್ದ ರಾಜೇಂದ್ರ ಕುಮಾರ್, ಚರ್ಚ್ ನ ಕಾರ್ಯಕ್ರಮಗಳಿಗೆ ಮುಂಚೂಣಿಯಲ್ಲಿರುತ್ತಿದ್ದ.
ಕಳೆದ ಬಾರಿ ಲಾಕ್ಡೌನ್ ಸಮಯದಲ್ಲಿ ಸಂತೋಷಿ ಸ್ಟೆಲ್ಲಾ ಅವರ ಮನೆಗೆ ಕಿಟ್ ಕೊಡಲೆಂದು ಬಂದಿದ್ದಾಗ, ಹದಿಹರೆಯದ ಮಗಳು ಹಾಗೂ ತಾಯಿ ಇರುವುದನ್ನು ನೋಡಿದ್ದ. ಅನಂತರ ತಾಯಿ ಮಗಳಿಗೆ ಸಹಾಯ ಮಾಡುವ ನೆಪದಲ್ಲಿ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ತಾಯಿ ಇರದ ಸಮಯದಲ್ಲಿ ಹದಿಹರೆಯದ ಮಗಳ ಜೊತೆ ಚಕ್ಕಂದ ಆಡುತ್ತಿದ್ದ. ತಾಯಿಗೆ ತಿಳಿಯದ ರೀತಿ ನಿರಂತರವಾಗಿ ಮಗಳ ಮೇಲೆ ಅತ್ಯಾಚಾರ ಮಾಡಿದ್ದು, ಆಕೆ ಗರ್ಭವತಿ ಆದಾಗ ಗರ್ಭಪಾತದ ಮಾತ್ರೆ ನೀಡುತ್ತಿದ್ದ. ಪದೇ ಪದೇ ಈ ರೀತಿ ಆಗಿದ್ದರಿಂದ 18 ವರ್ಷದ ಗ್ರೇಸ್ ಕೀರ್ತನಾಗೆ ಇತ್ತೀಚೆಗೆ ಬ್ಲೀಡಿಂಗ್ ಆಗಿ ಹೊಟ್ಟೆನೋವು ತೀವ್ರ ಆಗಿತ್ತು. ಗರ್ಭಪಾತದ ಮಾತ್ರೆಯ ಅಡ್ಡಪರಿಣಾಮದಿಂದಾಗಿ ಹೊಟ್ಟೆ ನೋವು ಆಗಿದ್ದರೂ, ಅದನ್ನು ಮರೆಮಾಚಿ ರಾಜೇಂದ್ರ ಕುಮಾರ್ ತುಮಕೂರಿನಲ್ಲಿ ತನ್ನ ಪರಿಚಯದ ವೈದ್ಯರ ಬಳಿ ಕೊಂಡೊಯ್ದು ಚಿಕಿತ್ಸೆ ಕೊಡಿಸಿದ್ದ. ಇಷ್ಟೆಲ್ಲಾ ಆಗುವವರೆಗೂ ಮಗಳಿಗಾದ ಸ್ಥಿತಿಯ ಬಗ್ಗೆ ತಾಯಿಗೆ ಗೊತ್ತಿರಲಿಲ್ಲ.
ಮಗಳ ಜೊತೆ ಸಲುಗೆ ಇರಿಸಿದ್ದರ ಬಗ್ಗೆ ತಾಯಿಗೆ ಅನುಮಾನಗಳಿದ್ದವು. ಈ ಬಗ್ಗೆ ರಾಜೇಂದ್ರ ಕುಮಾರ್ ವಿರುದ್ಧ ತರಾಟೆ ಮಾಡಿದ್ದರೂ ಆತ ಪ್ರಭಾವಿಯಾಗಿದ್ದರಿಂದ ಏನೂ ಮಾಡಲಾಗಲಿಲ್ಲ. ಈ ನಡುವೆ ಕೀರ್ತನಾಗೆ ಹೊಟ್ಟೆ ನೋವು ಬಿಗಡಾಯಿಸಿದ್ದರಿಂದ ಆಕೆಯನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಕೀರ್ತನಾ ಮೃತಪಟ್ಟಿದ್ದಾಳೆ.
ನಂತರ ಆಕೆಯ ಶವವನ್ನು ಕುಟುಂಬಸ್ಥರು ಎಲ್ಲಾ ಸೇರಿ ಬೆಂಗಳೂರಿನ ಶಾಂತಿನಗರದ ಬಳಿಯ ಕ್ರಿಶ್ಚಿಯನ್ ರುದ್ರಭೂಮಿಯಲ್ಲಿ ದಫನ ಮಾಡಿದ್ದರು. ನಂತರ ತಾಯಿ ತುಮಕೂರಿನ ಮನೆ ಸೇರಿದ್ದರು.
ಒಂದು ವಾರದ ನಂತರ ಸಂತೋಷಿ ಸ್ಟೆಲ್ಲಾ ತನ್ನ ಮಗಳು ಬಳಸುತ್ತಿದ್ದ ಮೊಬೈಲ್ ನ್ನು ತೆಗೆದು ನೋಡಿದಾಗ ಮೊಬೈಲ್ ಚಾಟಿಂಗ್, ಮತ್ತು ರಾಜೇಂದ್ರ ಕುಮಾರ್ ಗೆ ಕಳುಹಿಸಿದ ವಾಯ್ಸ್ ಮೆಸೇಜ್ ಕೇಳಿ ತಾಯಿಗೆ ಶಾಕ್ ಆಗಿತ್ತು.
ತನಗೆ ಆಗಿರುವ ಈ ಸ್ಥಿತಿಗೆ ರಾಜೇಂದ್ರ ಕುಮಾರ್ ಕಾರಣ ಎಂದು ಆಕೆಯೇ ವಾಯ್ಸ್ ಮೆಸೇಜ್ ಹಾಕಿದ್ದಳು. ನಿರಂತರ ಲೈಂಗಿಕ ಕಿರುಕುಳ, ವೀಡಿಯೋ, ಫೋಟೋ ಎಲ್ಲವೂ ಮೊಬೈಲ್ ನಲ್ಲಿದ್ದವು. ಮಗಳ ಜೊತೆಗಿರುವ ಫೋಟೋ ಕೂಡಾ ಇದ್ದವು. ಗರ್ಭಪಾತದ ಬಗ್ಗೆನೂ ಉಲ್ಲೇಖ ಮಾಡಲಾಗಿತ್ತು.
ಮಗಳು ತಾಯಿಗೆ ಹೇಳದೇ ಇರುವ ವಿಚಾರ ಮೊಬೈಲ್ ಮೂಲಕ ತಿಳಿದ ತಾಯಿ, ತುಮಕೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮೊಬೈಲ್ ನಲ್ಲಿದ್ದ ಸಾಕ್ಷ್ಯದಿಂದಾಗಿ ಆರೋಪಿ ಸಿಕ್ಕಿಬಿದ್ದಿದ್ದಲ್ಲದೇ, ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಗರ್ಭಪಾತದ ಅತಿಯಾದ ಬಳಕೆಯಿಂದಾಗಿ ಅಡ್ಡ ಪರಿಣಾಮ ಉಂಟಾಗಿದ್ದು ಅದರಿಂದಲೇ ಸಾವು ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.