ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಪ್ರತಿಭಾ ಪ್ರದೀಪ್ತಿ ಬಹುಮಾನ ವಿತರಣಾ ಕಾರ್ಯಕ್ರಮ |ಸಾಂಸ್ಕೃತಿಕ ಕಲೆಗಳನ್ನು ಗೌರವಿಸಿ ಪ್ರೀತಿಸಿದಾಗ ಉನ್ನತ ಮಟ್ಟಕ್ಕೆ ಏರಲು ಸಾಧ್ಯ- ಅಖಿಲಾ ಪಜಿಮಣ್ಣು*
ಪುತ್ತೂರು : ಸಾಂಸ್ಕೃತಿಕ ಕಲೆಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿದ್ದು ಭಾರತೀಯ ಮನಸ್ಸಿನ ಬೆಳವಣಿಗೆಗೆ ಪೂರಕವಾಗಿದೆ. ಇವುಗಳು ಮನಸ್ಸಿಗೆ ಮನೋರಂಜನೆ ಒದಗಿಸುವುದು ಮಾತ್ರವಲ್ಲದೆ ವ್ಯಕ್ತಿಯನ್ನು ಸಂವೇದನಶೀಲರನ್ನಾಗಿಸುತ್ತದೆ. ಎಲ್ಲಾ ಕಲೆಗಳನ್ನು ಗೌರವಿಸಿ ಪ್ರೀತಿಸಿದಾಗ ಅದು ನಮ್ಮನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ ಎಂದು ಖ್ಯಾತ ಗಾಯಕಿ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಅಖಿಲಾ ಪಜಿಮಣ್ಣು ಹೇಳಿದರು.
ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾದ ಪ್ರತಿಭಾ ಪ್ರದೀಪ್ತಿ-ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಭಾರತೀಯ ಕಲೆಗಳು ಸಂಸ್ಕೃತಿಯನ್ನು ಬೆಳೆಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣ ಮಾಡುತ್ತಿದೆ ಸಂಗೀತವು ಹೃದಯಕ್ಕೆ ಆನಂದವನ್ನೂ ಬುದ್ಧಿಗೆ ಜ್ಞಾನವನ್ನೂ ನೀಡುತ್ತದೆ. ಬದುಕಿನಲ್ಲಿ ಶಿಸ್ತನ್ನು ರೂಪಿಸುತ್ತದೆ ಅಂತಃಸತ್ವವನ್ನು ಅರಳಿಸುತ್ತದೆ. ಪ್ರತಿಭೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಅಡಕವಾಗಿರುತ್ತದೆ. ಸತತ ಪರಿಶ್ರಮದೊಂದಿಗೆ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದಗ ತೃಪ್ತಿಯನ್ನು ಹೊಂದಬಹುದು. ಸೋಲು ಬಂದಾಗಲೆಲ್ಲ ಧೃತಿಗೆಡದೆ ಪ್ರಯತ್ನವನ್ನು ಮುಂದುವರಿಸಿಕೊಂಡು ಹೋಗಬೇಕು. ವಿದ್ಯಾರ್ಥಿ ಜೀವನದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಿದ ಕಾರಣ ಉತ್ತಮ ಗಾಯಕಿಯಾಗಿ ಉನ್ನತ ಮಟ್ಟಕ್ಕೆ ಏರಲು ತನ್ನಿಂದ ಸಾಧ್ಯವಾಯಿತು. ಓದಿನ ಜೊತೆ ಜೊತೆಗೆ ಸಂಗೀತವನ್ನು ಕಲಿಯಲು ಸಂಸ್ಥೆಯ ಶಿಕ್ಷಕರು ಪ್ರೋತ್ಸಾಹಿಸಿದರು. ಉತ್ತಮ ಶಿಕ್ಷಣವನ್ನು ನೀಡಿದ ವಿದ್ಯಾಸಂಸ್ಥೆ, ಗುರುಹಿರಿಯರು ಮತ್ತು ಪ್ರೋತ್ಸಾಹಿಸಿದ ಹೆತ್ತವರಿಗೆ ಕೃತಜ್ಞರಾಗಿದ್ದೇನೆ ಎಂದು ತನ್ನ ಕಾಲೇಜು ದಿನಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಸಂಚಾಲಕ ಕೃಷ್ಣಪ್ರಸಾದ್ ನಡ್ಸಾರ್ ಮಾತನಾಡಿ ಉನ್ನತ ಮಟ್ಟಕ್ಕೆ ಏರಲು ಕಾರಣವಾದ ಮೆಟ್ಟಿಲುಗಳ ಸ್ಮರಣೆ ನಮಗೆ ಯಾವತ್ತೂ ಇರಬೇಕು. ಶಿಕ್ಷಣದ ಜೊತೆಗೆ ಸಂಸ್ಕೃತಿ ನೀಡಿದಾಗ ಅದು ಪ್ರತಿಭೆಗೆ ಅವಕಾಶ ನೀಡುತ್ತದೆ. ಕಲೆ ಉತ್ತಮ ಜ್ಞಾನ ಮತ್ತು ಸಂಸ್ಕೃತಿಯನ್ನು ನೀಡುತ್ತದೆ. ಪುರಸ್ಕಾರದಿಂದ ಅಹಂಕಾರ ಯಾವತ್ತೂ ಬರಬಾರದು. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಇದೇ ರೀತಿ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಬರಬೇಕು. ಪ್ರತಿಭೆಗೆ ಬೆಳಕು ಹರಿಯಲಿ ಎನ್ನುವುದೇ ಪ್ರತಿಭಾ ಪ್ರದೀಪ್ತಿ ಕಾರ್ಯಕ್ರಮದ ಸಂದೇಶ ಎಂದರು.
ಕಾಲೇಜಿನ ಪ್ರಾಚಾರ್ಯ ಮಹೇಶ್ ನಿಟಿಲಾಪುರ ಮಾತನಾಡಿ ಕಾಲೇಜು ಕೇವಲ ಪಠ್ಯ ಚಟುವಟಿಕೆಗಳಿಗೆ ಸೀಮಿತವಲ್ಲ, ಇಲ್ಲಿ ಬಹಳಷ್ಟು ಅವಕಾಶಗಳಿವೆ. ಅದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕು. ಹಲವಾರು ಅಡೆ ತಡೆ ಹಾಗೂ ಸಂಕಷ್ಟಗಳ ನಡುವೆಯೂ ಈ ಶೈಕ್ಷಣಿಕ ವರ್ಷದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಾಗೂ ಸ್ಪರ್ಧೆಗಳನ್ನು ಆಯೋಜಿಸಿಕೊಂಡು ಅದರಲ್ಲಿ ವಿದ್ಯಾರ್ಥಿಗಳು ಭಾಗವಹಿಸಿರುವುದು ವಿಶೇಷ. ಗಾಯಕಿಯಾಗಿ ಉನ್ನತ ಸ್ಥಾನಕ್ಕೇರಿದ ಅಖಿಲಾ ಪಜಿಮಣ್ಣು ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದರು.
ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಪ್ರಾರ್ಥನೆ ಮೂಲಕ ಆರಂಭಿಸಲಾಯಿತು. ಯಕ್ಷ ಗಾಯನ – ವಾದ್ಯ ವಾದನ ಎಂಬ ಶೀರ್ಷಿಕೆಯಲ್ಲಿ ವಿಘ್ನ ವಿನಾಶಕ ಗಣಪತಿಯನ್ನು ವಿವಿಧ ವಾದ್ಯಗಳ ಮೂಲಕ ಹಾಗೂ ಯಕ್ಷಗಾನ ಶೈಲಿಯಲ್ಲಿ ಸ್ತುತಿಸುವ ಮೂಲಕ ಕಾರ್ಯಕ್ರಮ ಆರಂಭವಾಯಿತು. ವಿದ್ಯಾರ್ಥಿಗಳ ಈ ಪ್ರಸ್ತುತಿಗಳು ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ್ ಶೆಟ್ಟಿಗಾರ್ ಇವರ ಮಾರ್ಗದರ್ಶನದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ 2021-22 ನೇ ಶೈಕ್ಷಣಿಕ ವರ್ಷದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷೆ ಅನಿತಾ ಆರ್ ಶೆಟ್ಟಿ ಉಪಸ್ಥಿತರಿದ್ದರು. ಕಾಲೇಜಿನ ಆಂಗ್ಲ ಭಾಷಾ ವಿಭಾಗದ ಉಪನ್ಯಾಸಕ ಆದಿತ್ಯ ಶರ್ಮ ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕನ್ನಡ ವಿಭಾಗದ ಉಪನ್ಯಾಸಕಿ ರತ್ನಾವತಿ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕಿ ಭಾಗ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು.