ಉಕ್ರೇನ್ ನಲ್ಲಿ ಸಂಕಷ್ಟದಲ್ಲಿ ಸಿಲುಕಿದ್ದ ಭಾರತೀಯರು ತಾಯ್ನಾಡಿಗೆ ಮರಳುತ್ತಿರುವಾಗ ಧೈರ್ಯ ತುಂಬಿದ ಪೈಲೆಟ್ !! | ನೀವೀಗ ಕ್ಷೇಮವಾಗಿದ್ದೀರಿ, ಆರಾಮವಾಗಿ ನಿದ್ರಿಸಿ ಎಂಬ ಸಾಂತ್ವನದ ಮಾತುಗಳ ಹೃದಯ ಸ್ಪರ್ಶಿ ವೀಡಿಯೋ ವೈರಲ್
ಉಕ್ರೇನ್ ನಲ್ಲಿರುವ ಭಾರತೀಯರ ಏರ್ ಲಿಫ್ಟ್ ಕಾರ್ಯ ಭರದಿಂದ ನಡೆಯುತ್ತಿದೆ. ಇನ್ನೂ ಕೂಡ ಭಾರತಕ್ಕೆ ಮರಳಲು ಅದೆಷ್ಟೋ ಮಂದಿ ಹರಸಾಹಸ ಪಡುತ್ತಿದ್ದಾರೆ. ತಾಯ್ನಾಡಿಗೆ ಮರಳಲು ಜೀವ ಸಂಕಟದಲ್ಲಿ ಸಿಲುಕಿದ್ದ ಭಾರತೀಯರ ಗುಂಪೊಂದನ್ನು ಸ್ಪೈಸ್ ಜೆಟ್ ವಿಮಾನದಲ್ಲಿ ಸ್ಥಳಾಂತರಿಸುತ್ತಿರುವಾಗ ವಿಮಾನದ ಪೈಲೆಟ್ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಉದ್ದೇಶಿಸಿ, ಹೃದಯಸ್ಪರ್ಶಿ ಘೋಷಣೆಯೊಂದನ್ನು ಮಾಡಿದ್ದು, ಆ ದೃಶ್ಯ ಈಗ ವೈರಲ್ ಆಗಿ ಲಕ್ಷಾಂತರ ಮಂದಿಯ ಹೃದಯ ಗೆದ್ದಿದೆ.
ಆ ಪೈಲೆಟ್ ವಿಮಾನದ ಆಸನಗಳ ನಡುವಿನ ದಾರಿಯಲ್ಲಿ ನಿಂತು, “ನಮಸ್ತೆ ಎಲ್ಲರಿಗೂ, ಬುಡಾಪೆಸ್ಟ್ನಿಂದ ದೆಹಲಿಗೆ ಪ್ರಯಾಣಿಸಲಿರುವ ಈ ವಿಶೇಷ ವಿಮಾನಕ್ಕೆ ನಿಮಗೆಲ್ಲರಿಗೂ ಸ್ವಾಗತ. ನೀವೆಲ್ಲರೂ ಸುರಕ್ಷಿತವಾಗಿ ಮತ್ತು ಕ್ಷೇಮವಾಗಿ ಇರುವುದನ್ನು ನೋಡಿ ನಮಗೆ ಸಂತೋಷವಾಗಿದೆ ಮತ್ತು ನಿಮ್ಮಲ್ಲಿ ಪ್ರತಿಯೊಬ್ಬರ ಧೈರ್ಯ ಮತ್ತು ದೃಢ ನಿಶ್ಚಯವನ್ನು ಕಂಡು ನಮಗೆ ಹೆಮ್ಮೆ ಎನಿಸುತ್ತಿದೆ. ನೀವು ಅನಿಶ್ಚಿತತೆ, ಕಷ್ಟ, ಭಯವನ್ನು ಮೀರಿಸಿ, ಸುರಕ್ಷಿತವಾಗಿ ಇಲ್ಲಿಗೆ ಬಂದಿದ್ದೀರಿ. ಈಗ ನಮ್ಮ ತಾಯ್ನೆಲಕ್ಕೆ ಹಿಂದಿರುಗುವ ಸಮಯ ಬಂದಿದೆ, ಮನೆಗೆ ಹಿಂದಿರುಗುವ ಸಮಯ ಬಂದಿದೆ” ಎಂದು ಘೋಷಿಸಿದರು.
ಅದಾದ ಬಳಿಕ ಪೈಲೆಟ್, ವಿಮಾನವು 9 ಗಂಟೆಗಳಲ್ಲಿ ದೆಹಲಿಯನ್ನು ತಲುಪಲಿದೆ ಎಂಬುದನ್ನು ಉಲ್ಲೇಖಿಸಿದರು. ಅವರು ಪ್ರಯಾಣಿಕರಿಗೆ ಆ ಪ್ರಯಾಣದಲ್ಲಿನ ನಿಲ್ದಾಣಗಳ ಕುರಿತು ಕೂಡ ಮಾಹಿತಿ ನೀಡಿದರು.ಅದಲ್ಲದೆ, ಎಲ್ಲರೂ ಆರಾಮವಾಗಿರಿ, ಒತ್ತಡ ಮುಕ್ತರಾಗಿರಿ ಮತ್ತು ನಿದ್ರಿಸಿ ಎಂದು ಹೇಳಿ, “ಜೈ ಹಿಂದ್” ಘೋಷಣೆಯ ಮೂಲಕ ತಮ್ಮ ಮಾತನ್ನು ಮುಕ್ತಾಯಗೊಳಿಸಿದರು.
ಈ ಇಡೀ ಸನ್ನಿವೇಶವನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು, ಸ್ಪೈಸ್ ಜೆಟ್ ತನ್ನ ಟ್ವಿಟ್ಟರ್ ಪುಟದಲ್ಲಿ ಹಂಚಿಕೊಂಡು, “ಉಕ್ರೇನ್ನಿಂದ ನಮ್ಮ ಮೊದಲ ವಿಮಾನದಲ್ಲಿ, ಅಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಜನರನ್ನು ಸ್ಪೈಸ್ಜೆಟ್ ಈಗ ಸ್ಥಳಾಂತರಿಸಿದೆ. ನಾವೀಗ ಭಾರತಕ್ಕೆ ಹಿಂದಿರುಗುವ ದಾರಿಯಲ್ಲಿದ್ದೇವೆ. ಅವರ ಆಶಾಭಾವನೆಯು, ಇನ್ನಷ್ಟು SG ವಿಮಾನಗಳ ಮೂಲಕ, ಯುದ್ಧಕ್ಕೆ ಸಾಕ್ಷಿಯಾಗುತ್ತಿರುವ ಹೆಚ್ಚಿನ ಭಾರತೀಯರಿಗೆ ಸಹಾಯ ಮಾಡುವ ಭರವಸೆಯನ್ನು ನಮ್ಮಲ್ಲಿ ಮೂಡಿಸಿದೆ” ಎಂದು ಬರೆದುಕೊಂಡಿತ್ತು.
ಪೈಲೆಟ್ನ ಈ ಹೃದಯಸ್ಪರ್ಶಿ ಘೋಷಣೆಯ ವೀಡಿಯೋ ತುಣುಕನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡ ಕ್ಷಣದಿಂದ ಅದು ಸುಮಾರು 7 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಕಂಡಿದೆ. ಮತ್ತು ಅದಕ್ಕೆ ಲೆಕ್ಕವಿಲ್ಲದಷ್ಟು ನೆಟ್ಟಿಗರು ಮೆಚ್ಚುಗೆಯನ್ನು ಕೂಡ ಸೂಚಿಸಿದ್ದಾರೆ. “ಸ್ಪೈಸ್ ಜೆಟ್ ಅದ್ಭುತ ಕೆಲಸವನ್ನು ಮಾಡಿದೆ” ಎಂದು ಒಬ್ಬ ನೆಟ್ಟಿಗ ಪ್ರತಿಕ್ರಿಯೆ ನೀಡಿದರೆ, ಇನ್ನೊಬ್ಬರು “ಪೈಲೆಟ್ ಮತ್ತು ವಿಮಾನ ಸಿಬ್ಬಂದಿಗಳೇ ಒಳ್ಳೆಯ ಕೆಲಸ ಮಾಡಿದ್ದೀರಿ, ನಿಮಗೆ ಈ ಭಾರತೀಯನ ವತಿಯಿಂದ ಧನ್ಯವಾದಗಳು” ಎಂದು ಬರೆದಿದ್ದಾರೆ.