ಪ್ರೀತಿಗೆ ಪೋಷಕರ ವಿರೋಧ : ರೈಲಿಗೆ ತಲೆಕೊಟ್ಟು ಪ್ರೇಮಿಗಳ ದಾರುಣ ಸಾವು!

ಪ್ರೇಮಿಗಳಿಬ್ಬರು ತಮ್ಮಿಬ್ಬರ ಪ್ರೀತಿಗೆ ಮನೆಯ ವಿರೋಧವಿದೆ ಎಂದು ತಿಳಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಆನೇಕಲ್ ತಾಲ್ಲೂಕಿನಲ್ಲಿ ನಡೆದಿದೆ.

 

ಮಾರನಾಯಕನಹಳ್ಳಿಯ ಮಣಿ ಹಾಗೂ ಕೊತ್ತಗೊಂಡಪಲ್ಲಿಯ ಅನುಷಾ ಆತ್ಮಹತ್ಯೆ ಮಾಡಿಕೊಂಡಿರುವ ಪ್ರೇಮಿಗಳಾಗಿದ್ದಾರೆ. ಈ ಇಬ್ಬರು ಅಕ್ಕಪಕ್ಕದ ಊರಿನ ನಿವಾಸಿಗಳಾಗಿದ್ದು, ಕಳೆದ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದರು. ಇವರ ಪ್ರೀತಿಯ ವಿಷಯ ಇಬ್ಬರ ಕುಟುಂಬದವರಿಗೆ ತಿಳಿದು, ಇಬ್ಬರಿಗೂ ಬೈದು ಬುದ್ಧಿವಾದ ಹೇಳಿದ್ದರು. ಇದರ ಜೊತೆಗೆ ಯುವತಿಗೆ ಮದುವೆ ಮಾಡಲು ನಿರ್ಧರಿಸಿದ್ದರು ಎನ್ನಲಾಗಿದೆ.

ಇದರಿಂದ ಮನನೊಂದ ಮಣಿ ಹಾಗೂ ಅನುಷಾ ಸಮಂದೂರು ಬಳಿಯ ರೈಲ್ವೆ ಹಳಿಯ ಬಳಿ ತೆರಳಿ ರೈಲಿಗೆ ಸಿಲುಕಿ ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ರೈಲ್ವೆ ಹಳಿಯ ಮೇಲೆ ಮೃತದೇಹಗಳನ್ನು ಕಂಡ ರೈಲ್ವೆ ಸಿಬ್ಬಂದಿ ಹಾಗೂ ಸ್ಥಳೀಯರು ಬೈಯಪ್ಪನಹಳ್ಳಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ.

Leave A Reply

Your email address will not be published.