ಉಕ್ರೇನ್ ನಲ್ಲಿ ಕರ್ನಾಟಕ ಮೂಲದ ವಿದ್ಯಾರ್ಥಿ ಸಾವಿಗೆ ಮರುಗಿದ ಪ್ರಧಾನಿ ಮೋದಿ!! ಸಾಂತ್ವನ ಕೋರಿ ಹೆತ್ತವರಿಗೆ ಕರೆ ಮಾಡಿದ ಮೋದಿ ಹೇಳಿದ್ದೇನು!?
ರಷ್ಯಾ ಹಾಗೂ ಉಕ್ರೆನ್ ನಡುವೆ ನಡೆಯುತ್ತಿರುವ ಯುದ್ಧದ ಭೀಕರತೆಗೆ ಸಿಲುಕಿ ಭಾರತೀಯ ಮೆಡಿಕಲ್ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ನಡೆದಿದ್ದು ವಿಷಯ ತಿಳಿಯುತ್ತಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಯ ಕುಟುಂಬಕ್ಕೆ ಧೈರ್ಯ ತುಂಬಿ ಸಾವಿಗೆ ಸಂತಾಪ ಸೂಚಿಸಿದ್ದಾರೆ.
ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯವರಾದ ಮೃತ ವಿದ್ಯಾರ್ಥಿ ನವೀನ್ (21) ನ ಹೆತ್ತವರಿಗೆ ಖುದ್ದು ಕರೆ ಮಾಡಿದ ಪ್ರಧಾನಿ, ನಿಮ್ಮೊಂದಿಗೆ ನಾವಿದ್ದೇವೆ, ಮಗನ ಸಾವಿನ ದುಃಖ ಭರಿಸುವ ಶಕ್ತಿಯನ್ನು ದೇವರು ನಿಮಗೆ ನೀಡಲಿ ಎಂದು ಮೃತ ವಿದ್ಯಾರ್ಥಿ ನವೀನ್ ನ ತಂದೆಯಾದ ಶೇಖರ ಗೌಡರಿಗೆ ಧೈರ್ಯ ತುಂಬುವ ಕಾರ್ಯ ಮಾಡಿದ್ದಾರೆ.
ಈ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯೂ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, ಆದಷ್ಟು ಬೇಗ ಉಳಿದವರನ್ನು ಸುರಕ್ಷಿತವಾಗಿ ಕರೆತರಲು ಭಾರತ ಸರ್ಕಾರ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅಗ್ರಹಿಸಿದ್ದಾರೆ.
ಇತ್ತ ಕರ್ನಾಟಕ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡಾ ಸಂತಾಪ ಸೂಚಿಸಿದ್ದು, ಈ ನಡುವೆ ಮಾಜಿ ಸಿ.ಎಂ ಸಿದ್ದರಾಮಯ್ಯ ಟೀಕಿಸಿದ್ದು, ಓರ್ವ ವಿದ್ಯಾರ್ಥಿಯ ಮರಣಕ್ಕೆ ಕೇಂದ್ರ ಸರ್ಕಾರವೇ ನೇರ ಹೊಣೆಯಾಗಿದೆ. ಆದಷ್ಟು ಬೇಗ ಉಳಿದವರನ್ನು ಜೀವಂತ ಕರೆತರುವಲ್ಲಿ ಕೇಂದ್ರ ವಿಫಲವಾಗಿದೆ ಎಂದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.