ATM ದರೋಡೆಗೆ ಯತ್ನಿಸಿದ ಕಳ್ಳರು ಇನ್ನೇನು ಸಿಕ್ಕಿಬೀಳುತ್ತೇವೆಂದು ಓಡಿದವರು ತಲುಪಿದ್ದು ಮಾತ್ರ ಪೊಲೀಸ್ ಸ್ಟೇಷನ್|ಅದೇಗೆ ಗೊತ್ತಾ!?

ಕಳ್ಳರಂದ್ರೇನೇ ಹಾಗೆ ಒಂದು ಕಳ್ಳತನಕ್ಕೆ ಕೈ ಹಾಕಿ ತಕ್ಷಣ ಪರಾರಿಯಾಗಲು ಹೊಂಚು ಹಾಕುತ್ತಾರೆ. ಕಳ್ಳತನ ಮಾಡಿ ಅಥವಾ ತಪ್ಪಿಸಿಕೊಳ್ಳೋ ನೆಪದಲ್ಲಿ ಎಲ್ಲಿ ಓಡುತ್ತಿದ್ದೀವಿ, ಯಾರ ಬಳಿ ಡ್ರಾಪ್ ಕೇಳಬೇಕು ಎಂಬುದು ತಲೆಯಲ್ಲೇ ಇರೋದಿಲ್ಲ. ಅದೇ ರೀತಿ ಇಲ್ಲೊಂದು ಕಡೆ ಏಟಿಎಂ ಕಳ್ಳತನಕ್ಕೆ ಸ್ಕೆಚ್ ಹಾಕಿದ ಕಳ್ಳರು ಸಿಕ್ಕಿ ಬಿದ್ದರೆಂದು ಅಂದುಕೊಂಡು ಬೇಕಾಬಿಟ್ಟಿ ಓಡಿ ಒಂದು ಕಾರಿನವರಲ್ಲಿ ಡ್ರಾಪ್ ಕೇಳಿ ಹೋಗುತ್ತಾರೆ. ಆದ್ರೆ ಇಷ್ಟೆಲ್ಲಾ ಮುಂದಾಲೋಚನೆ ಮಾಡಿ ತಪ್ಪಿಸಿಕೊಂಡರು ಇವರು ಕೊನೆಗೂ ತಲುಪಿದ್ದು ಮಾತ್ರ ಪೊಲೀಸ್ ಸ್ಟೇಷನ್!!ಅದೇಗೆ ನೀವೇ ನೋಡಿ..

 

ಇನ್ನೇನು ಎಟಿಎಂ ಯಂತ್ರ ಒಡೆದು ಹಣ ಎಗರಿಸಬೇಕೆನ್ನುವಷ್ಟರಲ್ಲಿ ಸಾರ್ವಜನಿಕರ ಕಣ್ಣಿಗೆ ಬಿದ್ದ ಕಳ್ಳರಿಬ್ಬರು ತಕ್ಷಣ ತಪ್ಪಿಸಿಕೊಳ್ಳಲು ಓಡುತ್ತಾರೆ.ಆದರೂ ಜನ ಬೆನ್ನಟ್ಟುತ್ತಾರೆ. ಅವರಿಂದ ತಪ್ಪಿಸಿಕೊಳ್ಳಲು ಅದೇ ರಸ್ತೆಯಲ್ಲಿ ಬರುತ್ತಿದ್ದ ಕಾರೊಂದಕ್ಕೆ ಕೈಅಡ್ಡಹಾಕಿದ ಕಳ್ಳರು ಡ್ರಾಪ್ ಕೇಳಿದ್ದಾರೆ.ಕಾರು ನಿಲ್ಲುತ್ತಿದ್ದಂತೆ ಅದರೊಳಗೆ ಹತ್ತಿ ಅಬ್ಬಾ ಬಚಾವಾದೆವು ಎಂದು ನಿಟ್ಟುಸಿರು ಬಿಡುತ್ತಿದ್ದಂತೆ ಆ ಕಾರು ನೇರವಾಗಿ ಪೊಲೀಸ್​ ಠಾಣೆ ಮುಂದೆ ನಿಲ್ಲುತ್ತೆ.

ಏನಿದು? ಪೊಲೀಸರಿಂದ ತಪ್ಪಿಸಿಕೊಳ್ಳಲು ಹೋಗಿ ಇಲ್ಲೇ ಬಂದಿವಲ್ಲ ಎಂದುಕೊಳ್ಳುವಷ್ಟರಲ್ಲಿ ತಾವು ಡ್ರಾಪ್​ ಕೇಳಿದ್ದು ಪೊಲೀಸರನ್ನೇ ಎಂಬ ಸತ್ಯ ಅರಿವಾಗುತ್ತೆ.ಇದು ಯಾವ ಸಿನಿಮಾ ಕಥೆ ತರ ಇದ್ದರೂ, ಇದೊಂದು ನಿಜ ಕಥೆ.ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದ ಮೇಳೆಕೋಟೆಯೊಂದರಲ್ಲಿ ನಡೆದಿದ್ದು,ಎಟಿಎಂ ಕೇಂದ್ರದಲ್ಲಿ ನಿನ್ನೆ ದರೋಡೆ ಪ್ರಯತ್ನ ನಡೆಸಿದ ಕಳ್ಳರಿಬ್ಬರ ರಿಯಲ್ ಕಥೆ.

ಮೇಳೆಕೋಟೆ ಎಟಿಎಂ ಕೇಂದ್ರ ದರೋಡೆಗೆ ಯತ್ನಿಸಿದ ಕಳ್ಳರಿಬ್ಬರು ಜನರಿಂದ ತಪ್ಪಿಸಿಕೊಂಡು ಪರಾರಿಯಾಗುತ್ತಿದ್ದರು. ಇದೇ ವೇಳೆ ಮಾಹಿತಿ ಪಡೆದ ಪೊಲೀಸರು ಖಾಸಗಿ ಕಾರಿನಲ್ಲಿ ಅದೇ ಮಾರ್ಗದಲ್ಲಿ ಬರುತ್ತಿದ್ದರು. ಈ ಬಗ್ಗೆ ಅರಿವೇ ಇಲ್ಲದ ಕಳ್ಳರು ಜನರಿಂದ ತಪ್ಪಿಸಿಕೊಳ್ಳಲು ಪೊಲೀಸರಿದ್ದ ಕಾರಿಗೆ ಕೈ ಅಡ್ಡಹಾಕಿ ಡ್ರಾಪ್​ ಕೇಳಿದ್ದರು.ಕಳ್ಳರನ್ನು ಹಿಡಿಯಲು ಬಂದ ಪೊಲೀಸರಿಗೆ ತುಪ್ಪ ಜಾರಿ ರೊಟ್ಟಿಗೆ ಬಿದ್ದಂತಾಯಿತು.

ಪ್ರಕರಣ ಸಂಬಂಧ ನೆಲಮಂಗಲ ತಾಲೂಕು ಅರಿಶಿನಕುಂಟೆ ನಿವಾಸಿಗಳಾದ ಸಚಿನ್ ಹಾಗೂ ಗಗನ್ ಎಂಬುವರನ್ನು ಬಂಧಿಸಿರುವ ದೊಡ್ಡಬಳ್ಳಾಪುರ ಠಾಣೆ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Leave A Reply

Your email address will not be published.