1242 ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ : ಪ್ರವೇಶ ಪತ್ರ ಫೆ.28 ರಿಂದ- ವಸ್ತ್ರ ಸಂಹಿತೆ ಕಡ್ಡಾಯ
ಬೆಂಗಳೂರು : ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಿಗೆ ಅಗತ್ಯವಿರುವ 1,242 ಸಹಾಯಕ ಪ್ರಾಧ್ಯಪಕರ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೆ ಮಾರ್ಚ್ ಮಧ್ಯಭಾಗದಲ್ಲಿ ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ ಅಗತ್ಯವಿರುವ ಪ್ರವೇಶ ಪತ್ರವನ್ನು ಫೆ.28 ರಿಂದ https://kea.kar.nic.in ಜಾಲತಾಣದಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯ ನಿರ್ವಾಹಕ ನಿರ್ದೇಶಕ ರಮ್ಯಾ ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ವಸ್ತ್ರಸಂಹಿತೆಯನ್ನು ನಿಗದಿಪಡಿಸಲಾಗಿದೆ. ಹಾಗೆನೇ ನಿಷೇಧಿತ ವಸ್ತುಗಳ ಪಟ್ಟಿಯನ್ನೂ ತಿಳಿಸಲಾಗಿದೆ. ಈ ಪರೀಕ್ಷೆಯನ್ನು ಮಾರ್ಚ್ 12 ರಿಂದ 16 ರವರೆಗೆ ನಡೆಯಲಿದೆ.
ಈ ಬಗ್ಗೆ ಶನಿವಾರ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಇತ್ತೀಚಿನ 2 ಭಾವಚಿತ್ರ, ಪ್ರವೇಶ ಪತ್ರ, ಗುರುತಿನ ಚೀಟಿಗಳನ್ನು ಕಡ್ಡಾಯವಾಗಿ ತರಬೇಕು ಎಂದು ಕಡ್ಡಾಯವಾಗಿ ತಿಳಿಸಲಾಗಿದೆ.
ಆದರೆ, ಪರೀಕ್ಷಾ ಕೊಠಡಿಗೆ ಅಭ್ಯರ್ಥಿಗಳು ಯಾವುದೇ ಇಲೆಕ್ಟ್ರಾನಿಕ್ ವಸ್ತುಗಳು ( ಮೊಬೈಲ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಬ್ಲೂಟೂತ್, ಕೈ ಗಡಿಯಾರ), ಆಹಾರ ಪದಾರ್ಥಗಳು, ಸ್ಟೇಷನರಿ ವಸ್ತುಗಳು ( ಪೆನ್ಸಿಲ್, ಕಾಗದ, ಎರೇಸರ್, ಇಂಚುಪಟ್ಟಿ, ಜಾಮಿಟ್ರಿ ಪೆಟ್ಟಿಗೆ, ಕ್ಯಾಲ್ಕುಲೇಟರ್, ಲಾಗ್ ಟೇಬಲ್) ಮತ್ತು ವೈಯಕ್ತಿಕ ವಸ್ತುಗಳನ್ನು ( ವ್ಯಾಲೆಟ್, ಅಲಂಕಾರಿಕ ಕನ್ನಡಕ, ಬೆಲ್ಟ್, ಟೋಪಿ, ಕ್ಯಾಮರಾ, ಆಭರಣಗಳು) ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ನಿಗದಿತ ವಸ್ತ್ರ ಸಂಹಿತೆ ಕಡ್ಡಾಯ : ಪರೀಕ್ಷೆ ಬರೆಯಲಿರುವ ಪುರುಷ ಅಭ್ಯರ್ಥಿಗಳಿಗೆ ಕೋವಿಡ್ ಮಾರ್ಗದರ್ಶಿ ಸೂತ್ರಗಳ ಹಿನ್ನೆಲೆಯಲ್ಲಿ ಅರೆಪಾರದರ್ಶಕ ಸರ್ಜಿಕಲ್ ಮಾಸ್ಕ್ ( ಎನ್- 95 ಮತ್ತು ಇತರ ಬಗೆಯ ಮಾಸ್ಕ್ ನಿಷಿದ್ಧ) ಅರೆದೋಳಿನ ಅಂಗಿ ಮತ್ತು ಸಾದಾ ಪ್ಯಾಂಟ್ ಹಾಗೂ ಚಪ್ಪಲಿಗಳನ್ನು ಕಡ್ಡಾಯಗೊಳಿಸಿದೆ.ಹಾಗೆಯೇ ಮಹಿಳಾ ಅಭ್ಯರ್ಥಿಗಳಿಗೆ ಸರ್ಜಿಕಲ್ ಮಾಸ್ಕ್, ಅರೆದೋಳಿನ ಉಡುಪುಗಳನ್ನು ಸೂಚಿಸಲಾಗಿದೆ.
ಪುರುಷರಾಗಲಿ, ಮಹಿಳೆಯರಾಗಲಿ ತುಂಬುದೋಳಿನ ಉಡುಪು, ಶೂ, ಆಭರಣ ( ಪದಕ, ಮೂಗುಬೊಟ್ಟು, ಕಿವಿಯೋಲೆ, ನೆಕ್ಲೇಸ್, ಬ್ರೇಸ್ಲೇಟ್) ಮತ್ತು ಅಲಂಕಾರಿಕ ಉಡುಪುಗಳನ್ನು ಧರಿಸಿಕೊಂಡು ಬರುವುದನ್ನು ನಿಷೇಧಿಸಲಾಗಿದೆ.
ಅಭ್ಯರ್ಥಿಗಳಿಗೆ ಯಾವುದೇ ಬ್ರ್ಯಾಂಡ್ ನ ಹೆಸರಿಲ್ಲದ ಸಾದಾ ಬಾಟಲಿಯಲ್ಲಿ ಕುಡಿಯುವ ನೀರನ್ನು ಪರೀಕ್ಷಾ ಕೊಠಡಿಗೆ ತೆಗೆದುಕೊಂಡು ಬರಲು ಅವಕಾಶ ಕೊಡಲಾಗಿದೆ ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ.