ಕೋಳಿ ಅಂಕಕ್ಕೆ ಸಿಕ್ತು ಕೋರ್ಟ್ ನಿಂದ ಅನುಮತಿ | ದ.ಕ. ಜಿಲ್ಲೆಯಲ್ಲಿ ಮತ್ತೆ ಕೋಳಿಕಾಳಗ ಶುರು | ಫೈಟರ್ ಹುಂಜಗಳಿಗೆ ಭಾರೀ ಬೇಡಿಕೆ
ಇವತ್ತು ಕರಾವಳಿಯಾದ್ಯಂತ ಗುಟುರು ಹಾಕುತ್ತಾ ಕಾಲ್ ಕೆರೆಯಿತ್ತಾ ಯುದ್ದಕ್ಕೆ ಆಹ್ವಾನಿಸುವ ಕೋಳಿಗಳದ್ದೆ ಸದ್ದು. ಬಣ್ಣ ಬಣ್ಣದ, ಗರಿಗರಿ ಬೆಡಗಿನ ಪುಕ್ಕದ ಸೌಮ್ಯವಾಗಿ ಕಂಡು ಬರುವ ಈ ಕೋಳಿಗಳು, ವಾಸ್ತವವಾಗಿ ಹಾಗಿಲ್ಲ. ಅವು ನಿಜಕ್ಕೂ ಜೀವದ ಹಂಗು ತೊರೆದು ಹೋರಾಡುವ ಗಟ್ಟಿ ಮನಸ್ಸಿನ ಪ್ರಾಣಿಗಳು. ಕೋಳಿ ಅಂಕ ಕರಾವಳಿ ಭಾಗದ ಕೃಷಿಕರ ಪ್ರಮುಖ ಮನೋರಂಜನಾ ಕ್ರೀಡೆಗಳಲ್ಲಿ ಒಂದು. ಈ ಎರಡೂ ಆಟಕ್ಕೆ ಅದರದ್ದೇ ಆದ ಮಹತ್ವವಿದೆ. ಪ್ರಾಣಿ ಹಿಂಸೆ ಹಾಗೂ ಜೂಜಾಟದ ಕಾರಣದಿಂದಾಗಿ ಈ ಎರಡೂ ಕ್ರೀಡೆಗಳಿಗೂ ರಾಜ್ಯದಲ್ಲಿ ನಿಷೇಧ ಹೇರಲಾಗಿತ್ತು. ನಂತರ ಕಂಬಳ ಕ್ರೀಡೆಗೆ ಹಲವು ಷರತ್ತುಗಳನ್ನು ಹಾಕುವ ಮೂಲಕ ಅನುಮತಿಯನ್ನು ನ್ಯಾಯಾಲಯ ನೀಡಿದ್ದು, ಹಾಗೆಯೇ ಕೋಳಿ ಅಂಕಕ್ಕೂ ಷರತ್ತುಬದ್ಧ ಅನುಮತಿ ದೊರೆತಿದೆ. ‘ಕಳ’ದ ಕುಳಗಳು ಫುಲ್ ಖುಷ್ !
ಈಗ ನ್ಯಾಯಾಲಯದಿಂದ ಅನುಮತಿ ದೊರೆತ ಬಳಿಕ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೋಳಿ ಅಂಕಗಳ ಸಂಖ್ಯೆ ಹೆಚ್ಚಾಗ ತೊಡಗಿದೆ.
ಖರೀದಿ ಮಾಡಿದ ಕೋಳಿಗಳನ್ನು ವಾರಕ್ಕೆ ಮೂರು ಬಾರಿ ನೀರಿಗೆ ಬೀಳಿಸಿ ಈಜು ಹೊಡೆಸುವುದು, ಮರಕ್ಕೆ ಹಾರಿಸುವುದು ಮುಂತಾದ ಫಿಸಿಕಲ್ ಟ್ರೈನಿಂಗ್ ಕೊಡಲಾಗುತ್ತಿದೆ. ಜತೆಗೆ ಹಂದಿ ಮಾಂಸದ ಎಣ್ಣೆ ತಿನ್ನಲು ಕೊಡುವುದು, ಹಲ್ಲಿಗಳನ್ನು ತಿನ್ನಲು ಕೊಡುವುದು, ಇನ್ನೊಂದು ಕೋಳಿಯ ಕೈಪೆ ( ಮೇದೋಜೀರಕ) ತಿನ್ನಿಸುವುದು ಹೀಗೆ ಕೋಳಿಗಳನ್ನು ದಷ್ಟಪುಷ್ಟವಾಗಿ ಮತ್ತು ಹಠ ದಾಯಕವಾಗಿ ರೆಡಿ ಮಾಡಿದ ಬಳಿಕವೇ ಕಾದಾಟಕ್ಕೆ ತರುವುದು ಸಾಂಗವಾಗಿ ನಡೆದಿದೆ.
10 ರಿಂದ 30 ಸಾವಿರದವರೆಗೀ ಫೈಟರ್ ಕೋಳಿಗಳು ಅಂಕದಲ್ಲಿ ಕಾದಾಟಕ್ಕೆ ಸಾಲುಗಟ್ಟಿ ಬರುತ್ತಿವೆ. ಇದರಿಂದಾಗಿ ಊರ ಕೋಳಿಯ ಬೆಲೆ ಆಕಾಶಕ್ಕೆ ಎಗರಿ ನಿಂತಿದೆ. ಭೂತದ ಕೋಲಕ್ಕೆ, ವಾರ್ಷಿಕ ಕಾಲಾವಧಿಯ ಭೂತಕ್ಕೆ ಬಡಿಸಲು ಕೋಳಿ ಖಾಲಿ !ಲಕ್ಷಗಳ ಮೇಲೆ, ಇವುಗಳ ಮೇಲೆ ಜೂಜನ್ನು ಕಟ್ಟಲಾಗುತ್ತದೆ. ಕುಪ್ಪುಳ, ಮೈರ, ಕಾವ, ಕೆಮ್ಮೈರ, ಬೊಳ್ಳೆ, ನೀಲೆ ಹೀಗೆ ಹಲವು ಬಣ್ಣಗಳ, ಹಲ ತರಹದ ಗುಣಲಕ್ಷಣದ ಕೋಳಿಗಳನ್ನು ಈ ಆಟಕ್ಕೆ ತಂದು ಕಲಕ್ಕೆ ಬಿಡಲಾಗುತ್ತದೆ. ನೂರಾರು ಮಂದಿ ಈ ಕೋಳಿ ಅಂಕ ವೀಕ್ಷಣೆ ಮಾಡುತ್ತಾರೆ. ಕಾದಾಡುವ ಕೋಳಿಗಳ ಮಧ್ಯೆ ಲಕ್ಷಾಂತರ ದುಡ್ಡು ಕೈ ಬದಲಾಗುತ್ತದೆ. ಕೋಳಿ ಫೈಟಿಂಗ್ ನಲ್ಲಿ ಗೆಲ್ಲಲು ಜ್ಯೋತಿಷ್ಯ ಕೂಡಾ ಸಹಾಯ ಮಾಡುತ್ತೆ. ಇಂತಹ ದಿನ, ಇದೇ ಬಣ್ಣದ ಕೋಳಿಗಳು ಗೆಲ್ಲುತ್ತವೆ ಅನ್ನುವುದನ್ನು ಕುಕ್ಕುಟ ಪಂಚಾಂಗ ತಿಳಿಸುತ್ತದೆ. ಎಷ್ಟೇ ಫೈಟಿಂಗ್ ನ ಕೋಳಿಯೇ ಇರಲಿ ಬಣ್ಣ ತಪ್ಪಿಸಿ ಆಡಿದರೆ ಹೋಯಿತು : ಆ ಕೋಳಿ ಮರುದಿನ ವಿರುದ್ಧ ಪಾರ್ಟಿಯ ಮನೆಯಲ್ಲಿ ಒಟ್ಟೆ ಕೋರಿಯಾಗಿ ( ಸೋತು ಹೋದ, ಅಥವಾ ಸತ್ತ ಕೋಳಿ) ಮಸಾಲೆಯಾಗುತ್ತದೆ.
ನ್ಯಾಯಾಲಯದ ಷರತ್ತಿನ ಅನ್ವಯ ಕೋಳಿ ಅಂಕದಲ್ಲಿ ಕಾದಾಟ ನಡೆಸುವ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟುವಂತಿಲ್ಲ. ಜೂಜಾಟ ನಡೆಸುವಂತಿಲ್ಲ ಎನ್ನುವ ಅಂಶ ಇದ್ದರೂ ಬಹುತೇಕ ಕೋಳಿ ಅಂಕ ಇವುಗಳಿಲ್ಲದೆ ನಡೆಯುವುದೇ ಇಲ್ಲ.
ದೈವ ದೇವಸ್ಥಾನಗಳ ಜಾತ್ರೆ ಸಂದರ್ಭದಲ್ಲಿ ಈ ಕೋಳಿ ಅಂಕ ಆರಂಭವಾಗುತ್ತಿದ್ದು, ಮನೋರಂಜನಾ ಕ್ರೀಡೆಯಾಗಿ ದ.ಕ.ಜಿಲ್ಲೆಯಲ್ಲಿ ನೋಡುತ್ತಿದ್ದರು. ಆದರೆ ಕಾಲಕ್ರಮೇಣ ಇದನ್ನು ಜೂಜಾಟದ ರೀತಿಯಲ್ಲಿ ಬಳಸಿಕೊಳ್ಳಲಾಗುತ್ತಿದೆ.
ದೈವಾರಾಧನೆ ನಡೆಯುವ ಕಡೆಗಳಲ್ಲಿ ಸ್ಥಳೀಯ ಆಡಳಿತವು ಈ ಕೋಳಿ ಅಂಕಕ್ಕೆ ಅನುಮತಿಯನ್ನು ನೀಡುತ್ತಿತ್ತು. ಈಗ ಇದೊಂದು ಆಟದ ಜತೆಗೆ ಪ್ರತಿಷ್ಠೆ ಮತ್ತು ವ್ಯವಹಾರ ಕೂಡ ಆಗಿದೆ.