ವೋಕ್ಸ್ ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರುಗಳ ಉತ್ಪಾದನೆ ಭಾರತದಲ್ಲಿ ಸ್ಥಗಿತ|12 ವರ್ಷಗಳ ನಾಗಾಲೋಟಕ್ಕೆ ಬ್ರೇಕ್!
ಜರ್ಮನಿ ಮೂಲದ ಕಾರು ತಯಾರಿಕಾ ಸಂಸ್ಥೆಯಾದ ವೋಕ್ಸ್ ವ್ಯಾಗನ್, ಭಾರತದಲ್ಲಿ ತಾನು ಉತ್ಪಾದಿಸುವ ಪೋಲೋ ಹಾಗೂ ವೆಂಟೋ ಹೆಸರಿನ ಕಾರುಗಳ ತಯಾರಿಕೆಯನ್ನು ನಿಲ್ಲಿಸಲಿದೆ.
ಹೊಸ ಸಂಚಲನವನ್ನೇ ಭಾರತದಲ್ಲಿ ಸೃಷ್ಟಿ ಮಾಡಿದ ಹ್ಯಾಚ್ ಬ್ಯಾಕ್ ಹಾಗೂ ಸೆಡಾನ್ ಕಾರಿನ ಮೂಲಕ ವೋಕ್ಸ್ ವ್ಯಾಗನ್ ತನ್ನ ಎರಡು ಕಾರುಗಳ ಉತ್ಪಾದನೆಯನ್ನು ಭಾರತದಲ್ಲಿ ಸ್ಥಗಿತಗೊಳಿಸುತ್ತಿದೆ.
ಬರೋಬ್ಬರಿ 12 ವರ್ಷಗಳ ಕಾಲ ಭಾರತದಲ್ಲಿ ವೋಕ್ಸ್ ವ್ಯಾಗನ್ ಪೋಲೋ ಹಾಗೂ ವೆಂಟೋ ಕಾರು ಜನಪ್ರಿಯತೆಯ ತುತ್ತತುದಿಗೇರಿತ್ತು. ಈಗ ಇದರ ಓಟ ನಿಲ್ಲಲಿದೆ.
ಜನಪ್ರಿಯ ಕಾರುಗಳ ಪೈಕಿ ಪೋಲೋ ಹಾಗೂ ವೆಂಟೋ ಕಾರಿನ ಉತ್ಪಾದನೆ ಸ್ಥಗಿತಗೊಳಿಸಲು ವೋಕ್ಸ್ ವ್ಯಾಗನ್ ಇಂಡಿಯಾ ಮುಂದಾಗಿದೆ.
ಕಳೆದೊಂದು ವರ್ಷದಿಂದ ಪೋಲೋ ಹಾಗೂ ವೆಂಟೋ ಕಾರಿನ ಬೇಡಿಕೆ ಕುಸಿದಿದ್ದು, ಹಲವು ಡೀಲರ್ ಗಳಲ್ಲಿ ಕಾರು ಬುಕ್ ಆಗಿಲ್ಲ. ಹೀಗಾಗಿ ವೋಕ್ಸ್ ವ್ಯಾಗನ್ ಪೋಲೋ ( VW Polo) ಉತ್ಪಾದನೆ ನಿಲ್ಲಿಸಲು ಮುಂದಾಗಿದೆ.
2022 ರ ಮೇ ತಿಂಗಳಲ್ಲಿ ವೆಂಟೋ ಕಾರಿನ ಬುಕಿಂಗ್ ಕೊನೆಗೊಳ್ಳಲಿದೆ. ಹಾಗೆಯೇ ಜೂನ್ 2022 ರಿಂದ ಪೋಲೋ ಕಾರಿನ ಬುಕಿಂಗ್ ಅಂತ್ಯವಾಗಲಿದೆ.
ವೋಕ್ಸ್ ವ್ಯಾಗನ್ ವೆಂಟೋ ಕಾರು ಬದಲು ವೋಕ್ಸ್ ವ್ಯಾಗನ್ ವರ್ಚಸ್ ಸೆಡಾನ್ ಎಂಬ ಹೊಸ ಮಾಡೆಲ್ ಕಾರನ್ನು ಬಿಡುಗಡೆ ಮಾಡುವುದಾಗಿ ಹೇಳಿದೆ. ಪೋಲೋ ಬದಲು ಯಾವ ಕಾರು ಬಿಡುಗಡೆ ಆಗುತ್ತೆ ಈ ಬಗ್ಗೆ ಮಾಹಿತಿ ಇಲ್ಲ.
ವರ್ಚಸ್ ಕಾರಿನ ಬೆಲೆ ವೆಂಟೋ ಕಾರಿಗಿಂತ ಹೆಚ್ಚಿದೆ. ವೆಂಟೋಗಿಂತ ಹೆಚ್ಚು ಸ್ಥಳಾವಕಾಶ, ಗಾತ್ರದಲ್ಲಿ ದೊಡ್ಡದಾಗಿದೆ. ಪವರ್ ಫುಲ್ ಎಂಜಿನ್ , ಪ್ರೀಮಿಯಂ ಸೆಡಾನ್ ಕಾರು ಇದಾಗಿದೆ. ಈ ಕಾರಣದಿಂದಾಗಿ ಬೆಲೆಯೂ ದುಬಾರಿ.