ದಿ. ಮೋನಪ್ಪ ಗೌಡ ಕೂರೋಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಕಾರ್ಯಕ್ರಮ

ಸ್ನೇಹ ಜೀವಿ ಮನಸ್ಸಿನ ವ್ಯಕ್ತಿತ್ವ : ಸುಬ್ರಾಯ ಭಟ್ ನೀರ್ಕಜೆ

 

ಪರಿಶುದ್ದ ವ್ಯಕ್ತಿತ್ವದಿಂದ ಸಮಾಜದಲ್ಲಿ ಸ್ಥಾನ : ಜಗನ್ನಾಥ ಪೂಜಾರಿ ಮುಕ್ಕೂರು

ಜೀವನ ಮೌಲ್ಯ ಇತರರಿಗೆ ಪ್ರೇರಣೆಯಾಗುವಂತಹದು : ಡಾ.ನರಸಿಂಹ ಶರ್ಮಾ

ಮುಕ್ಕೂರು: ಕುಂಡಡ್ಕ- ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ನೇಸರ ಯುವಕ ಮಂಡಲ ಆಶ್ರಯದಲ್ಲಿ ಹಿರಿಯ ಆರೋಗ್ಯ ಪರಿವೀಕ್ಷಕ ದಿ.ಮೋನಪ್ಪ ಗೌಡ ಕೂರೋಡಿ ಅವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ ಮುಕ್ಕೂರು ಶಾಲಾ ವಠಾರದಲ್ಲಿ ಫೆ.20 ರಂದು ನಡೆಯಿತು.
ಪ್ರಾರಂಭದಲ್ಲಿ ಪ್ರಗತಿಪರ ಕೃಷಿಕ ಕುಶಾಲಪ್ಪ ಗೌಡ ಬೊಣ್ಯಕುಕ್ಕು ಅವರು ದೀಪ ಬೆಳಗಿಸಿ ಪುಷ್ಪ ನಮನ ಸಲ್ಲಿಸಿದರು.

ನುಡಿನಮನ ಸಲ್ಲಿಸಿದ ಪ್ರಗತಿಪರ ಕೃಷಿಕ ಸುಬ್ರಾಯ ಭಟ್ ನೀರ್ಕಜೆ, ತನ್ನ ಕೆಲಸವನ್ನು ಅತ್ಯಂತ ನಿಷ್ಠೆಯಿಂದ ಮಾಡಿ ಎಲ್ಲರ ಜತೆ ಸ್ನೇಹಿಜೀವಿಯಾಗಿ ಬದುಕಿ ಬಾಳಿದವರು ಮೋನಪ್ಪ ಗೌಡರು. ಅವರ ಜೀವನ‌ ಮೌಲ್ಯಗಳನ್ನು ಸ್ಮರಿಸುವ ಮೂಲಕ ಸಾರ್ವಜನಿಕ ಶ್ರದ್ಧಾಂಜಲಿ ಸಲ್ಲಿಸುವುದು ಅವರಿಗೆ ನೀಡುವ ಗೌರವ. ಆ ಕೆಲಸ ನೇಸರ ಯುವಕ ಮಂಡಲದ ಮೂಲಕ ಆಗಿರುವುದು ಶ್ಲಾಘನೀಯ ಎಂದರು.
ಆರೋಗ್ಯ ಇಲಾಖೆಯ ಸೇವೆಯೊಂದಿಗೆ ವೃತ್ತಿ ‌ಜೀವನ ಸಾಗಿಸಿ ಬಳಿಕ ಪ್ರಗತಿಪರ ಕೃಷಿಕರಾಗಿ, ಊರ ಗೌಡ ಮನೆತನದವರಾಗಿ ಚಿರಪರಿಚಿತರಾದ ಅವರ ಅಗಲುವಿಕೆಯಿಂದ ಊರಿನ ಹಿರಿಯ ಕೊಂಡಿಯೊಂದು ಕಳಚಿದೆ ಎಂದರು.

ಸಭಾಧ್ಯಕ್ಷತೆ ವಹಿಸಿದ್ದ ಪೆರುವಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಮಾತನಾಡಿ, ಹುಟ್ಟು‌-ಸಾವಿನ ಮಧ್ಯೆ ಸಮಾಜ ಗುರುತಿಸುವುದು ವ್ಯಕ್ತಿಯ ವ್ಯಕ್ತಿತ್ವವನ್ನು. ‌ಮೋನಪ್ಪ ಗೌಡ ಅವರು ಪರಿಶುದ್ಧ ವ್ಯಕ್ತಿತ್ವದ ಮೂಲಕ ಸಮಾಜದಲ್ಲಿ ಜೀವನ ಸಾಗಿಸಿದವರು ಎಂದರು.

ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕುಂಬ್ರ ದಯಾಕರ ಆಳ್ವ ಮಾತನಾಡಿ, ತನ್ನ ಕೆಲಸ ಕಾರ್ಯದ ಜತೆಗೆ ಊರಿನ‌ ನಾನಾ ಚಟುವಟಿಕೆಗಳಿಗೂ ತನ್ನಿಂದಾದ ಸಹಕಾರ, ಪ್ರೋತ್ಸಾಹ ನೀಡುತ್ತಿದ್ದ ಮೋನಪ್ಪ ಗೌಡ ಅವರು ಸರಳ, ಸ್ನೇಹ ಜೀವಿಯಾಗಿದ್ದರು. ಅವರ ಸ್ಮರಣೆ ಅತ್ಯಂತ ಒಳ್ಳೆಯ ಕಾರ್ಯ ಎಂದರು.

ಖ್ಯಾತ ವೈದ್ಯ, ಕಾನಾವು ಕ್ಲಿನಿಕ್ ನ ಡಾ.ನರಸಿಂಹ ಶರ್ಮಾ ಮಾತನಾಡಿ, ಸಮಾಜ ಗೌರವಿಸುವ ಹಾಗೆ ಸ್ನೇಹಪರ ರೀತಿಯಲ್ಲಿ ಬದುಕಿದ ಮೋನಪ್ಪ ಗೌಡ ಅವರ ಜೀವನ ಮೌಲ್ಯ ಇತರರಿಗೆ ಪ್ರೇರಣೆಯಾಗಬೇಕು. ತನ್ಮೂಲಕ ಅವರ ನೆನೆಪು ಶಾಶ್ವತವಾಗಿ ಇರುವಂತಾಗಬೇಕು ಎಂದರು.

ಮುಕ್ಕೂರು ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಧಾಕರ ರೈ ಕುಂಜಾಡಿ ಮಾತನಾಡಿ, ಮೋನಪ್ಪ ಗೌಡ ಅವರ ಅಗಲುವಿಕೆ ಸಮಾಜಕ್ಕೆ ತುಂಬಲಾರದ ನಷ್ಟ. ಅವರ ವ್ಯಕ್ತಿತ್ವ ಪ್ರತಿಯೋರ್ವರಿಗೆ ಮಾದರಿ ಎಂದರು.

ಕುಂಡಡ್ಕ-ಮುಕ್ಕೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಂತ ಗೌಡ ಕುಂಡಡ್ಕ ಮಾತನಾಡಿ, ಸಂಘ ಸಂಸ್ಥೆಗಳ ಯಶಸ್ಸಿಗೆ ಊರ ಪ್ರತಿ ಮನೆಯವರ ಸಹಕಾರ ಕಾರಣ. ಹಾಗಾಗಿ ಊರಿನ ಜನರ ಕಷ್ಟ ಸುಖಗಳ ಜತೆ ಕೂಡ ಪಾಲ್ಗೊಳ್ಳುವುದು ನಮ್ಮ ಕರ್ತವ್ಯ. ಈ ನಿಟ್ಟಿನಲ್ಲಿ ಸಂಘಟನೆಯ ನೇತೃತ್ವದಲ್ಲಿ ಮೋನಪ್ಪ ಗೌಡರನ್ನು ಸ್ಮರಿಸುವ ಕಾರ್ಯ ನಡೆದಿದೆ ಎಂದರು.

ಶಾಲಾ ವಿದ್ಯಾರ್ಥಿಗಳಿಗೆ
ಬರಹದ ಪುಸ್ತಕ ಕೊಡುಗೆ
ಕೂರೋಡಿ ಕುಟುಂಬದ ಪರವಾಗಿ ಉಮೇಶ್ ಕೆಎಂಬಿ ಮಾತನಾಡಿ ತಂದೆಯ ಅಗಲಿಕೆಯ ಸಂದರ್ಭದಲ್ಲಿ ಸಾಂತ್ವನ, ಶ್ರದ್ಧಾಂಜಲಿ ಸಭೆಯ ಮೂಲಕ‌ ನುಡಿನಮನ ಅರ್ಪಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ದಿ.ಮೋನಪ್ಪ ಗೌಡ ಕೂರೋಡಿ ಅವರ ನೆನಪಿಗೋಸ್ಕರ ಮುಕ್ಕೂರು ಶಾಲೆಯ ಎಲ್ಲ ವಿದ್ಯಾರ್ಥಿಗಳಿಗೆ ಬರಹದ ಪುಸ್ತಕ, ಪೆನ್ನು ಅನ್ನು ಗ್ರಾ.ಪಂ.ಅಧ್ಯಕ್ಷರ ಸಮ್ಮುಖದಲ್ಲಿ ಎಸ್ಡಿಎಂಸಿ ಅಧ್ಯಕ್ಷರಿಗೆ ಹಸ್ತಾಂತರಿಸಿದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವ್ಯವಸ್ಥಾಪನಾ ಸಮಿತಿ ಸದಸ್ಯ ನಾರಾಯಣ ಕೊಂಡೆಪ್ಪಾಡಿ, ಜ್ಯೋತಿ ಯುವಕ ಮಂಡಲದ ಮಾಜಿ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ, ಮುಕ್ಕೂರು ಹಾಲು ಉತ್ಪಾದಕರ ಸಹಕಾರ ಸಂಘದ ಮಾಜಿ ಉಪಾಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ನುಡಿನಮನ ಸಲ್ಲಿಸಿದರು.

ಗ್ರಾ.ಪಂ.ಸದಸ್ಯೆ ಗುಲಾಬಿ ಬೊಮ್ಮೆಮಾರು, ನ್ಯಾಯವಾದಿ ಗಣಪತಿ ಭಟ್ ನೀರ್ಕಜೆ, ಉಷಾ ಉಮೇಶ್ ಕೂರೋಡಿ ಮೊದಲಾದವರು ಉಪಸ್ಥಿತರಿದ್ದರು. ನೇಸರ ಯುವಕ ಮಂಡಲದ ಕಾರ್ಯದರ್ಶಿ ಶಶಿಕುಮಾರ್ ಬಿ.ಎನ್. ನಿರೂಪಿಸಿದರು.

Leave A Reply

Your email address will not be published.