ಮಂಗಳೂರು : ಮೀಟರ್ ಬಡ್ಡಿ ಕಿರುಕುಳ| 10 ಲಕ್ಷ ಸಾಲಕ್ಕೆ 50 ಲಕ್ಷ ವಸೂಲಿ ಮಾಡಿದ ದಂಪತಿ| ಮಹಿಳೆ ಸೇರಿ ಮೂವರ ಬಂಧನ

ಮಂಗಳೂರು : ಕಂಪ್ಯೂಟರ್ ಕ್ಲಾಸ್ ನಡೆಸುತ್ತಿದ್ದ ಮಹಿಳೆಗೆ ಹಣಕ್ಕಾಗಿ ಕಿರುಕುಳ ನೀಡಿ 50 ಲಕ್ಷ ರೂ ವರೆಗೆ ಸುಲಿಗೆ ವಸೂಲಿ ಮಾಡಿದ ಆರೋಪದ ಮೇಲೆ ಮಹಿಳೆ ಸೇರಿದಂತೆ ಮೂವರನ್ನು ಐಪಿಸಿ ಸೆಕ್ಷನ್ ಗಳು ಮತ್ತು ಕರ್ನಾಟಕ ಅತಿಯಾದ ಬಡ್ಡಿ ವಸೂಲಿ ನಿಷೇಧ ಕಾಯ್ದೆಯಡಿ ಬಂಧಿಸಲಾಗಿದೆ.

 

ಬಂಧಿತರನ್ನು ಜೆಪ್ಪಿನಮೊಗರು ನಿವಾಸಿ ಶರ್ಮಿಳಾ ( 48) ಮತ್ತು ಮೋಹನ್ ದಾಸ್ ( 52) ಮತ್ತು ಬಂಟ್ವಾಳ ತಾಲೂಕಿನ ಸತಿ ಕಿರಣ್ ( 52) ಎಂದು ಗುರುತಿಸಲಾಗಿದೆ.

ನಂತೂರು ನಿವಾಸಿ ಸ್ವರೂಪ ಎನ್ ಶೆಟ್ಟಿ ಎಂಬುವವರು 2016 ರಲ್ಲಿ ಜೆಪ್ಪಿನಮೊಗರಿನಲ್ಲಿ ಕಂಪ್ಯೂಟರ್ ತರಬೇತಿ ಕ್ಲಾಸ್ ನಡೆಸುತ್ತಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬನ ತಾಯಿ ತನ್ನ ಮನೆ ಏಲಂ ಆಗುತ್ತದೆ ಎಂದು ಇವರಲ್ಲಿ ಅವಲತ್ತುಕೊಂಡಿದ್ದು, ಹಾಗಾಗಿ ತನ್ನ ಸ್ನೇಹಿತೆಯಾದ ಶರ್ಮಿಳಾ ( 48) ಎಂಬುವವರನ್ನು ಪರಿಚಯಿಸಿ ಕೊಟ್ಟಿದ್ದಾರೆ‌. ನಂತರ ಶರ್ಮಿಳಾ ಹಾಗೂ ಆಕೆಯ ಗಂಡ ಮೋಹನ್ ದಾಸ್ ವಿದ್ಯಾರ್ಥಿಯ ತಾಯಿಗೆ ತಿಂಗಳಿಗೆ ಹತ್ತು ಪರ್ಸೆಂಟ್ ಬಡ್ಡಿಗೆ ಹತ್ತು ಲಕ್ಷ ಹಣ ಸಾಲ‌ನೀಡಿದ್ದರು. ಸಾಲ ಪಡೆದ ಮಹಿಳೆ ತಿಂಗಳಿಗೆ ಒಂದು ಲಕ್ಷ ಬಡ್ಡಿ ಕಟ್ಟಬೇಕಿತ್ತು. ಅನಂತರ ಮಹಿಳೆಯನ್ನು ಪೀಡಿಸಿ ಹಣ ವಾಪಾಸು ಪಡೆದಿದ್ದಾರೆ ಎಂದು ಹೇಳಲಾಗಿದೆ.

ಸಾಲಗಾರ ಸಾಲವನ್ನು ಮರುಪಾವತಿ ಮಾಡಿದ ನಂತರವೂ ಆರೋಪಿಗಳು ಆಕೆಗೆ ಕಿರುಕುಳ ನೀಡಲಾರಂಭಿಸಿ ಚೆಕ್ ನೀಡುವಂತೆ ಬ್ಲಾಕ್ ಮೇಲ್ ಮಾಡಿದ್ದಾರೆ.

2016 ರಿಂದ ಆರೋಪಿಗಳು ಸ್ವರೂಪಾ ಅವರಿಂದ 50 ಲಕ್ಷ ರೂಪಾಯಿ ಸುಲಿಗೆ ಮಾಡಿದ್ದಾರೆ ಎನ್ನಲಾಗಿದೆ.

ಇದರಿಂದ ನಷ್ಟಕ್ಕೀಡಾಗಿ ಕಂಪ್ಯೂಟರ್ ತರಬೇತಿ ಕೇಂದ್ರವನ್ನೇ ಎರಡು ವರ್ಷಗಳ ಹಿಂದೆ ಸ್ಥಗಿತಗೊಳಿಸಿದ್ದರು. ಈ ಬಗ್ಗೆ ಸ್ವರೂಪ ಶೆಟ್ಟಿ ಎರಡು ದಿನ ಹಿಂದೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ.

Leave A Reply

Your email address will not be published.