ಗ್ರಾಹಕರೇ ಗಮನಿಸಿ: ಆನ್ಲೈನ್ ಕಂಪನಿಗಳಿಂದ ಅಮೇಜಿಂಗ್ ಮೋಸ| ‘ಕ್ಯಾಶ್ ಬ್ಯಾಕ್’ ಆಮಿಷಕ್ಕೆ ಒಳಗಾಗಿ 3 ಲಕ್ಷ ದುಡ್ಡು ಕಳೆದುಕೊಂಡ ವ್ಯಕ್ತಿ
ಆನ್ಲೈನ್ ನಲ್ಲಿ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಅಪಾಯನೂ ಇದೆ ಎಂದು ಎಲ್ಲರಿಗೂ ಗೊತ್ತಿದೆ. ಒಂದೆರಡು ವಹಿವಾಟಿಗೆ ಕ್ಯಾಷ್ ಬ್ಯಾಕ್ ನೀಡಿ ನಂತರ ಅದರ ಚಟ ಹತ್ತಿಸಿ ನಂತರ ಲಕ್ಷ ಲಕ್ಷ ಹಣವನ್ನು ಲೂಟಿ ಮಾಡುವ ಎಷ್ಟೋ ಆಫರ್ ಗಳು ನಮಗೆ ಬರುತ್ತಲೇ ಇವೆ. ಇಂತಹ ಮೋಸದ ಕಂಪನಿಗಳ ಬಗ್ಗೆ ಗ್ರಾಹಕರೇ ಎಚ್ಚರ!
ಇದೇ ಕ್ಯಾಷ್ ಬ್ಯಾಕ್ ಆಮಿಷಕ್ಕೆ ಒಳಗಾಗಿ ಇಲ್ಲೊಬ್ಬ ವಿದ್ಯಾರ್ಥಿ ಮೂರು ಲಕ್ಷ ರೂಪಾಯಿ ಕಳೆದುಕೊಂಡ ಘಟನೆಯೊಂದು ರಾಯಚೂರು ಜಿಲ್ಲೆಯ ಲಿಂಗಸುಗೂರು ಎಂಬಲ್ಲಿ ನಡೆದಿದೆ. ಮೋಸ ಹೋದ ವಿದ್ಯಾರ್ಥಿ ಶ್ರೀಧರ್ ಪಾಟೀಲ್.
ವಿಷಯ ಆಗಿದ್ದೇನೆಂದರೆ ಈತ ಪಾರ್ಟ್ ಟೈಂ ಕೆಲಸಕ್ಕಾಗಿ ಹುಡುಕುತ್ತಿದ್ದ. ಆಗ ಸಿಕ್ಕ ಒಂದು ಲಿಂಕ್ ಕ್ಲಿಕ್ ಮಾಡಿದಾಗ ಪ್ರಾಡಕ್ಟ್ ಖರೀದಿಗೆ ಆಫರ್ ಬಂದಿದೆ. 88,000 ಮತ್ತು 69,000 ಕ್ಕೆ ಎರಡು ವಸ್ತುಗಳನ್ನು ಖರೀದಿಸಿದ್ದಾನೆ. ಆಗ ಆತನಿಗೆ ಕ್ಯಾಷ್ ಬ್ಯಾಕ್ ಸಿಕ್ಕಿದೆ. ಇದರಿಂದ ಮತ್ತಷ್ಟು ಪ್ರೇರೇಪಿತನಾದ ಈತ ತನ್ನ ಸ್ನೇಹಿತರಿಂದ ಸಾಲ ಮಾಡಿ 3,78,600 ರೂ ಹಾಕಿ ತನಗೆ ಬೇಕಾದ ವಸ್ತು ಖರೀದಿ ಮಾಡಿದ್ದಾನೆ. ಆದರೆ ಕ್ಯಾಶ್ ಬ್ಯಾಕ್ ಸಿಕ್ಕಿಲ್ಲ. ಬದಲಿಗೆ ಇನ್ನೂ ದುಡ್ಡು ಹಾಕಿ ಕ್ಯಾಷ್ ಬ್ಯಾಕ್ ಸಿಗುತ್ತದೆ ಎಂದು ಮೆಸೇಜ್ ಬರುತ್ತದೆ. ಅಷ್ಟರಲ್ಲಿ ಆತನಿಗೆ ತಾನು ಮೋಸ ಹೋದ ಕಥೆ ಗೊತ್ತಾಗಿದೆ. ರಾಯಚೂರು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.