ಪವಾಡಗಳಿಂದಲೇ ಫೇಮಸ್ ಅಂತೆ ಈ ಬಸಪ್ಪ |ನಟಿ ರಚಿತಾ ರಾಮ್ ಕೂಡ ಆಶೀರ್ವಾದ ಪಡೆದುಕೊಂಡ ಬಸಪ್ಪನಿಂದ ಇನ್ನೊಮ್ಮೆ ಪವಾಡ|ಅಷ್ಟಕ್ಕೂ ಈ ಬಸಪ್ಪನ ಪವಾಡ ಏನೆಂದು ನೀವೇ ನೋಡಿ!
ಗೋವುಗಳನ್ನು ದೇವರ ಸ್ಥಾನದಲ್ಲಿಟ್ಟು ಪೂಜಿಸುತ್ತಾರೆ.ಯಾಕಂದ್ರೆ ಅವುಗಳ ಶಕ್ತಿ ಅಂತದ್ದು.ಕೆಲವರು ಇಂತಹ ನಂಬಿಕೆಗಳನ್ನು ನಂಬುವುದಿಲ್ಲ. ಆದರೆ ಈ ಬಸಪ್ಪನ ಪವಾಡ ನೋಡಿದ ಮೇಲೆ ನಂಬಲೇ ಬೇಕು. ಇದರ ಪವಾಡ ಮಾತ್ರ ಅಂತಿಂತದ್ದು ಅಲ್ಲ.ಅಷ್ಟಕ್ಕೂ ಯಾರಿದು ಬಸಪ್ಪ? ಇದರ ಪವಾಡ ಏನೆಂಬುದು ಇಲ್ಲಿದೆ ನೋಡಿ.
ಹೌದು. ಈ ಬಸಪ್ಪ ಎಲ್ಲಾ ಗ್ರಾಮಸ್ಥರಿಂದ ಪೂಜಿಸಲ್ಪಡುತಿದ್ದು,ಹೊನ್ನನಾಯಕನ ಹಳ್ಳಿ ಧರೆಗೆ ದೊಡ್ಡವರು ಮಂಟೇಸ್ವಾಮಿ ಅವತಾರವೆಂದೇ ಕರೆಯಲ್ಪಡುವ ಈ ಬಸಪ್ಪ ಈಗಾಗಲೇ ತನ್ನ ಪವಾಡಗಳಿಂದ ಬಹಳ ಖ್ಯಾತಿ ಪಡೆದಿದ್ದಾನೆ. ಇದೀಗ ಗ್ರಾಮದಲ್ಲಿ ಮತ್ತೊಂದು ಪವಾಡ ಮಾಡಿದ್ದಾನಂತೆ. 56 ವರ್ಷಗಳಿಂದ ಮೂರು ದೇಗುಲಗಳಲ್ಲಿದ್ದ ಸಮಸ್ಯೆಯನ್ನು ಕ್ಷಣ ಮಾತ್ರದಲ್ಲಿ ಬಸಪ್ಪ ಪರಿಹರಿಸಿದ್ದು,ಇದನ್ನು ನೋಡಿ ಮಂಡ್ಯದ ಗ್ರಾಮಸ್ಥರೆಲ್ಲ ಬೆರಗಾಗಿದ್ದಾರೆ.
ಮಂಡ್ಯ ತಾಲೂಕಿನ ದೊಡ್ಡಬಾನಸವಾಡಿ ಗ್ರಾಮದ ಮೂರು ದೇವಾಲಯಗಳಿಗೆ ಮೂವರು ಪೂಜಾರಿಗಳ ನೇಮಕ ಮಾಡುವ ಮೂಲಕ ಹೊನ್ನನಾಯಕನಹಳ್ಳಿ ಬಸಪ್ಪ ಪವಾಡ ಮಾಡಿದ್ದಾನೆ. ದೊಡ್ಡಬಾನಸವಾಡಿ ಗ್ರಾಮದ ಚೌಡೇಶ್ವರಿ, ಪಟ್ಟಲದಮ್ಮ ಹಾಗೂ ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಅರ್ಚಕರು ಇರಲಿಲ್ಲ. ಹೀಗಾಗಿ ಅರ್ಚಕರ ಆಯ್ಕೆಗೆ ಬಸಪ್ಪನನ್ನು ಗ್ರಾಮಕ್ಕೆ ಕರೆಸಲಾಯಿತು.
ಈ ಮೂರು ದೇಗುಲಗಳಲ್ಲಿ ಸುಮಾರು 56 ವರ್ಷಗಳಿಂದ ಸಮಸ್ಯೆ ಇತ್ತು. ಈ ಮೂರು ದೇಗುಲಕ್ಕೂ ಪೂಜಾರಿಗಳ ಆಯ್ಕೆಯಾಗದೇ ವರ್ಷದ ಉತ್ಸವ, ಬಂಡಿ ಹಬ್ಬ ಇತ್ಯಾದಿಗಳು ನಡೆಯುತ್ತಲೇ ಇರಲಿಲ್ಲ. ವಯೋಸಹಜವಾಗಿ 56 ವರ್ಷದ ಹಿಂದೆ ಅರ್ಚಕರು ಮೃತಪಟ್ಟಿದ್ದರು. ಬಳಿಕ ಮತ್ತಿಬ್ಬರು ಪೂಜಾರಿಗಳನ್ನು ಗ್ರಾಮಸ್ಥರು ನೇಮಿಸಿದ್ದರು. ಆದರೆ ಅರ್ಚಕರ ಮೈ ಮೇಲೆ ದೇವರು ಬರುತ್ತಿಲ್ಲ ಎಂಬ ಕಾರಣಕ್ಕೆ ಹಬ್ಬ, ಉತ್ಸವಗಳನ್ನು ನಿಲ್ಲಿಸಲಾಗಿತ್ತು.
ದೇವರ ಹಬ್ಬ, ಉತ್ಸವಗಳು ನಡೆಯದೇ ಇರುವುದರಿಂದ ಗ್ರಾಮಕ್ಕೆ ಒಳಿತಾಗುತ್ತಿಲ್ಲ ಅಂತ ಗ್ರಾಮಸ್ಥರೆಲ್ಲ ಆತಂಕಗೊಂಡಿದ್ದಾರೆ. ಹೇಗಾದರೂ ಮಾಡಿ ಈ ಸಮಸ್ಯೆಗೆ ಮುಕ್ತಿ ಕೊಡಬೇಕು ಅಂತ ದೈವ ಸ್ವರೂಪಿ ಮಂಟೇಸ್ವಾಮಿ ಬಸಪ್ಪನ ಮೊರೆ ಹೋಗಿದ್ದರು. ಹೀಗಾಗಿ ಗ್ರಾಮಸ್ಥರ ಆಹ್ವಾನದ ಮೇರೆಗೆ ಇಂದು ಗ್ರಾಮಕ್ಕೆ ಬಸಪ್ಪ ಆಗಮಿಸಿದ್ದ.ಊರಿಗೆ ಬಂದ ಬಳಿಕ ಬಸಪ್ಪನಿಗೆ ಸಂಪ್ರದಾಯದಂತೆ ಪೂಜಿಸಿ, ಪ್ರಾರ್ಥನೆ ಸಲ್ಲಿಸಲಾಯ್ತು. ನಂತರ ಜನರ ಗುಂಪಿನಲ್ಲಿ ಕುಳಿತಿದ್ದ ಮೂವರನ್ನು ಬಸಪ್ಪ ಗುರುತಿಸಿತು. ಬಳಿಕ ಅವರನ್ನು ದೇಗುಲದ ಮುಂಭಾಗದ ಕೊಳಕ್ಕೆ ತಳ್ಳಿ ಅರ್ಚಕರ ಆಯ್ಕೆಯನ್ನು ಮಾಡಿತು.ಚೌಡೇಶ್ವರಿ ದೇಗುಲಕ್ಕೆ ಪ್ರತಾಪ್ ಎಂಬುವರನ್ನು, ಪಟ್ಟಲದಮ್ಮ ದೇಗುಲಕ್ಕೆ ಮಂಜು ಎಂಬುವರನ್ನು ಹಾಗೂ ಮಾರ್ಗೋನಹಳ್ಳಿ ಅಮ್ಮ ದೇಗುಲಕ್ಕೆ ಶಿವಣ್ಣ ಎಂಬುವರನ್ನು ಅರ್ಚಕರನ್ನಾಗಿ ಬಸಪ್ಪ ಆಯ್ಕೆ ಮಾಡಿತು. ಈ ಮೂಲಕ 56 ವರ್ಷಗಳಿಂದ ಇದ್ದ ಸಮಸ್ಯೆಗೆ ಬಸಪ್ಪ ಮುಕ್ತಿ ನೀಡಿದ್ದು,ಇದನ್ನು ಕಂಡ ಗ್ರಾಮಸ್ಥರು ಭಕ್ತಿಯಿಂದ ಕೈಮುಗಿದಿದ್ದಾರೆ.
ಅಂದಹಾಗೆ ಈ ಬಸಪ್ಪ ತನ್ನ ಪವಾಡಗಳಿಂದಲೇ ಫೇಮಸ್. ಈ ಹಿಂದೆ ಇದೇ ರೀತಿ ಹಲವು ಸಮಸ್ಯೆಗಳಿಗೆ ಈ ಬಸಪ್ಪ ಕ್ಷಣದಲ್ಲೇ ಪರಿಹಾರ ನೀಡಿದ್ದಾನೆ. ನಾಡಿನ ಹಲವು ಗಣ್ಯರು ಆತನ ಆಶೀರ್ವಾದ ಪಡೆದಿದ್ದಾರೆ. ನಟಿ ರಚಿತಾ ರಾಮ್ ಕೂಡ ಹಿಂದೊಮ್ಮೆ ಬಸಪ್ಪನ ಆಶೀರ್ವಾದ ಪಡೆದಿದ್ದರು.