ದಲಿತ ಯುವಕನನ್ನು ಪ್ರೀತಿಸಿ ಮದುವೆಯಾದ ತಪ್ಪಿಗೆ ತವರು ಮನೆಯೇ ಸ್ಮಶಾನವಾಯಿತು!! ಗ್ರಾಮದಲ್ಲೇ ಭಯ ಸೃಷ್ಟಿಸಿದ ತ್ರಿವಳಿ ಕೊಲೆ-ಆತ್ಮಹತ್ಯೆ ಪ್ರಕರಣ

ದಲಿತ ಯುವನೊಬ್ಬನನ್ನು ಮಗಳು ಪ್ರೀತಿಸಿ ಮದುವೆಯಾಗಿ ಮನೆ ಬಿಟ್ಟಳೆಂಬ ಕಾರಣಕ್ಕೆ ಕೋಪಗೊಂಡ ತಂದೆ ತನ್ನ ಪತ್ನಿ ಹಾಗೂ ಇಬ್ಬರು ಕಿರಿಯ ಪುತ್ರಿಯರನ್ನು ನಿರ್ಧಯವಾಗಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ನಾಗಪಟ್ಟಣಂ ಜಿಲ್ಲೆಯಿಂದ ವರದಿಯಾಗಿದೆ.

 

ತನ್ನ ಮನೆ ಸಮೀಪವೇ ಟೀ ಸ್ಟಾಲ್ ನಡೆಸುತ್ತಿದ್ದ ಕೆ. ಲಕ್ಷಣನ್ ಎಂಬಾತನೆ ಕೊಲೆ ನಡೆಸಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಹತ್ಯೆಗೊಳಗಾದವರನ್ನು ಪತ್ನಿ ಭುವನೇಶ್ವರಿ ಹಾಗೂ ಪುತ್ರಿಯರಾದ ವಿನೋತಿನಿ, ಅಕ್ಷಯ ಎಂದು ಗುರುತಿಸಲಾಗಿದೆ.

ಘಟನೆ ವಿವರ: ಲಕ್ಷಣನ್ ಅವರ ಹಿರಿಯ ಮಗಳು ತನಲಕ್ಷ್ಮೀ ಕಳೆದ ನವೆಂಬರ್ ನಲ್ಲಿ ವಿಮಲ್ ರಾಜ್ ಎನ್ನುವ ದಲಿತ ಯುವಕನನ್ನು ಪ್ರೀತಿಸಿ ಮದುವೆಯಾಗಿ ಮನೆ ಬಿಟ್ಟು ಹೋಗಿದ್ದಳು. ಅಂದಿನಿಂದ ಲಕ್ಷಣನ್ ಏನೋ ಕಳೆದುಕೊಂಡಂತೆ ವರ್ತಿಸುತ್ತಿದ್ದರು. ಪ್ರತೀ ನಿತ್ಯವೂ ಮನೆಯಲ್ಲಿ ಮಗಳ ಮೇಲಿನ ಕೋಪವನ್ನು ಇತರರೊಂದಿಗೆ ತೋರಿಸಿಕೊಂಡು ಹತಾಷೆಗೆ ಒಳಗಾಗಿದ್ದರು.

ಘಟನೆ ನಡೆದ ದಿನವೂ ಇದೇ ವಿಚಾರಕ್ಕೆ ಕೋಪಗೊಂಡ ಆರೋಪಿ, ತನ್ನ ಹೆಂಡತಿಯ ಮೇಲೆ ರುಬ್ಬುವ ಕಲ್ಲನ್ನು ಎತ್ತಿಹಾಕಿ ಕೊಲೆ ನಡೆಸಿದ್ದಾನೆ. ಇದಾದ ಬಳಿಕ ಇಬ್ಬರು ಕಿರಿಯ ಪುತ್ರಿಯರನ್ನು ಕೊಂದಿದ್ದು, ಬಂಧನವಾಗುವ ಭಯದಿಂದ ತಾನೂ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಎಂದಿನಂತೆ ಟೀ ಸ್ಟಾಲ್ ತೆರೆಯದ ಕಾರಣ ಸ್ಥಳೀಯರು ಅನುಮಾನದಿಂದ ಮನೆ ಕಡೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದ್ದು, ಪೊಲೀಸರಿಗೂ ಮಾಹಿತಿ ಸಿಕ್ಕಿ ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ತ್ರಿವಳಿ ಕೊಲೆಯ ಬಳಿಕ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು ಹೆಚ್ಚಿನ ಪೊಲೀಸರನ್ನೂ ನಿಯೋಜನೆ ಮಾಡಿ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.

Leave A Reply

Your email address will not be published.